ಹೆಡತಲೆ ಗ್ರಾಪಂ ಮುಂದೆ ರೈತ ಸಂಘದಿಂದ ಪ್ರತಿಭಟನೆ

15 njd news 02
Published on

ನಂಜನಗೂಡು: ಹೆಡತಲೆ ಗ್ರಾಮ ಪಂಚಾಯಿತಿಯಲ್ಲಿ 2014-15ನೇ ಹಣಕಾಸು ಯೋಜನೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಬುಧವಾರ ತಾಲೂಕಿನ ಹೆಡತಲೆ ಗ್ರಾಮ ಪಂಚಾಯಿತಿ ಮುಂದೆ ಪ್ರತಿಭಟನೆ ನಡೆಸಿದರು.

ಜಿಲ್ಲಾ ಉಪಾಧ್ಯಕ್ಷ ಶಂಕರ ನಾಯಕ ನೇತೃತ್ವದಲ್ಲಿ ರೈತ ಸಂಘದ ನೂರಾರು ಕಾರ್ಯಕರ್ತರು ಗ್ರಾಮ ಪಂಚಾಯಿತಿ ಮುಂಭಾಗ ಜಮಾವಣೆಗೊಂಡು ಪಂಚಾಯಿತಿ ಆವರಣದಲ್ಲಿ ದನ-ಕರುಗಳನ್ನು ಕಟ್ಟಿಹಾಕಿ, ಸ್ಥಳದಲ್ಲಿ ಅಡುಗೆ ತಯಾರಿಸಿ ಊಟ ಮಾಡುವ ಮೂಲಕ ಗ್ರಾಮ ಪಂಚಾಯಿತಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಹೆಡತಲೆ ಗ್ರಾಪಂನಲ್ಲಿ 2014-15ನೇ ಹಣಕಾಸು ಯೋಜನೆಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿರುವುದು ಮೇಲ್ನೋಟಕ್ಕೆ ಕಂಡುಬಂದಿಲ್ಲ. ದನದ ಕೊಟ್ಟಿಗೆ ಹಾಗೂ ಶೌಚಗೃಹಗಳನ್ನು ನಿರ್ಮಾಣ ಮಾಡಿಕೊಂಡಿದ್ದರೂ ಈವರೆಗೂ ಹಣ ಬಿಡುಗಡೆ ಮಾಡಿಲ್ಲ. ಕಳೆದ ಹತ್ತು ವರ್ಷಗಳ ಹಿಂದಿನ ಮನೆಗಳ ನಿರ್ಮಾಣದ ತನಿಖೆ ಮಾಡಬೇಕು. ಇ-ಸ್ವತ್ತು ಮಾಡಿಸಲು ಹೆಚ್ಚುವರಿ ಹಣ ವಸೂಲು ಮಾಡುತ್ತಾರೆ ಎಂದು ಗಂಭೀರವಾಗಿ ಆರೋಪಿಸಿ ಪ್ರತಿಭಟನೆ ನಡೆಸಿದರು.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತಾಲೂಕು ಪಂಚಾಯಿತಿ ಇ.ಒ.ಜೆರಾಲ್ಡ್ ರಾಜೇಶ್ ಭೇಟಿ ನೀಡಿ ಪ್ರತಿಭಟನಾನಿರತರಿಂದ ಮನವಿ ಪತ್ರ ಪಡೆದು 15 ದಿನಗಳಲ್ಲಿ ಪರಿಹಾರದ ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಅಂತ್ಯಗೊಳಿಸಿದರು.

ಪ್ರತಿಭಟನೆಯಲ್ಲಿ ಮಾಜಿ ಉಪಾಧ್ಯಕ್ಷ ಮಣಿಕಂಠ, ತಾಲೂಕು ಸಂಚಾಲಕ ರಂಗಸ್ವಾಮಿನಾಯಕ, ಹೋಬಳಿ ಘಟಕದ ಅಧ್ಯಕ್ಷ ಸಿದ್ದೇಶ್, ರಂಗರಾಜು, ಶ್ರೀನಿವಾಸ್, ಮಲ್ಲಳ್ಳಿ ರವಿ, ಮಾದಪ್ಪ, ಪುಟ್ಟನಾಯಕ, ಮಂಜು, ಮಹದೇವ ನಾಯಕ, ಗೋವಿಂದನಾಯಕ, ರಂಗರಾಜು ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net