

ಹಾವೇರಿ: ಕೋಮು ಸಾಮರಸ್ಯ ಸೇರಿದಂತೆ ಸಾಮಾಜಿಕ ಸ್ವಾಸ್ಥ್ಯ ಕದಡುವಂತಹ ಸಂದೇಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮುನ್ನ ವಿಷಯಗಳ ಪೂರ್ವ ಪರಿಶೀಲನೆ ಕುರಿತು ರ್ಚಚಿಸಲು ಎಲ್ಲ ಜಾಲತಾಣಗಳ ಮುಖ್ಯಸ್ಥರನ್ನು ಕರೆದು ರ್ಚಚಿಸಲು ನಿರ್ಧರಿಸಲಾಗಿದೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೇಸ್ಬುಕ್, ವಾಟ್ಸ್ಆಪ್,
ಟ್ವಿಟರ್, ಇನ್ಸ್ಟ್ಟಾಗ್ರಾಂ ಸೇರಿ ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ವಿಷಯಗಳನ್ನು ಪೋಸ್ಟ್ ಮಾಡುವ ಮುನ್ನ ಆಯಾ ಕಂಪನಿಗಳು ಪರಿಶೀಲಿಸಿ ಈ ಹಂತದಲ್ಲೇ ಕಡಿವಾಣ ಹಾಕುವ ಸಾಧ್ಯತೆಗಳ ಕುರಿತು ಕಂಪನಿಯ ಮುಖ್ಯಸ್ಥರೊಂದಿಗೆ ರ್ಚಚಿಸಲು ತೀರ್ವನಿಸಲಾಗಿದೆ. ಇದಕ್ಕಾಗಿ ಇನ್ನೊಂದು ವಾರದಲ್ಲಿ ಸಭೆಯನ್ನು ಕರೆಯಲಾಗಿದೆ. ಸಭೆಯಲ್ಲಿನ ಚರ್ಚೆಯ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರಗೊಳ್ಳುವ ಆಕ್ಷೇಪಾರ್ಹ ಸಂದೇಶಗಳ ಕಡಿವಾಣಕ್ಕೆ ಏನು ಮಾಡಬೇಕು ಎಂಬುದನ್ನು ತೀರ್ವನಿಸಲಾಗುವುದು ಎಂದರು. ನೆರೆಯಂತಹ ವಿಪತ್ತು ನಿರ್ವಹಣೆಗೆ ರಾಜ್ಯದ ಬೇಡಿಕೆಯಂತೆ 4 ಎನ್ಡಿಆರ್ಎಫ್ ತಂಡಗಳ ಜತೆಗೆ ಹೆಚ್ಚುವರಿ 4 ತಂಡಗಳನ್ನು ಕಳುಹಿಸಲು ಕೇಂದ್ರ ಸಮ್ಮತಿಸಿದೆ. ಭೂಕುಸಿತ ಸೇರಿ ತೀವ್ರ ತರದ ವಿಪತ್ತು ಸಂದರ್ಭದಲ್ಲಿ ಕ್ಷಿಪ್ರ ಕಾರ್ಯಾಚರಣೆ ಹಾಗೂ ಸಂಪರ್ಕಕ್ಕೆ ಅನುಕೂಲವಾಗುವಂತೆ ಅಂತರ ರಾಜ್ಯ ವಿಪತ್ತು ನಿರ್ವಹಣೆಯ ಘಟಕಗಳ ಸ್ಥಾಪನೆಗೆ ಕೇಂದ್ರಕ್ಕೆ ಕೋರಲಾಗಿದೆ ಎಂದರು. ಕರೊನಾ ನಿಯಂತ್ರಣಕ್ಕಾಗಿ ಆರ್ಟಿಪಿಆರ್ ಹಾಗೂ ರ್ಯಾಪಿಡ್ ಆಂಟಿಜನ್
ಟೆಸ್ಟ್ಗಳನ್ನು ಹೆಚ್ಚಿಸಲು ಸೂಚಿಸಲಾಗಿದೆ. ಕರೊನಾ ನಿಮೂಲನೆಗೆ ರೆಮಿಡಿಡಿಸಿವರ್ ಲಸಿಕೆ ಅತ್ಯುತ್ತಮ ಪರಿಣಾಮವಿದೆ. ಒಂದು ಲಸಿಕೆಗೆ 5 ಸಾವಿರ ರೂ. ಬೆಲೆಯಿದೆ. ರೆಮಿಡಿಡಿಸಿವರ್ ಚುಚ್ಚುಮದ್ದನ್ನು ಹೆಚ್ಚಿನ ಪ್ರಮಾಣದಲ್ಲಿ ಪೂರೈಸುವ ಮೂಲಕ ಸೋಂಕಿತರ ಜೀವ ಉಳಿಸಲು ಕ್ರಮ ವಹಿಸಲಾಗುವುದು ಎಂದರು.
ಕಾಲೇಜ್ಗೆ ಶಂಕುಸ್ಥಾಪನೆ
ಹಾವೇರಿಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜ್ ಕಟ್ಟಡ ಶಂಕುಸ್ಥಾಪನೆ ಕಾರ್ಯವನ್ನು ಈ ತಿಂಗಳಾಂತ್ಯದೊಳಗೆ ನೆರವೇರಿಸಲಾಗುವುದು. ವರ್ಚುವಲ್ ಫ್ಲಾಟ್ಫಾರಂ ಮೂಲಕ ಮುಖ್ಯಮಂತ್ರಿಗಳು ಮೆಡಿಕಲ್ ಕಾಲೇಜ್ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ. ಜಿಲ್ಲೆಯಲ್ಲಿ ಗುಡ್ಲೈಫ್ ಮಿಲ್ಕ್ ಘಟಕ ಸ್ಥಾಪನೆಗೆ ಉದ್ದೇಶಿಸಲಾಗಿದೆ. ಈಗಾಗಲೇ ಕೆಎಂಎಫ್ ಸಭೆಯಲ್ಲಿ ಮಂಜೂರಾತಿ ದೊರೆತಿದೆ. ಈ ಟೆಟ್ರಾಪ್ಯಾಕಿಂಗ್ ಘಟಕದ ಸ್ಥಾಪನೆಯಿಂದ ಹಾಲು ಬಹಳ ದಿನಗಳವರೆಗೆ ಹಾಳಾಗದಂತೆ ಇಡಬಹುದು. ಮಾರುಕಟ್ಟೆಗೆ ಅನುಕೂಲಕರವಾಗಿದೆ. ಹಾವೇರಿಯಲ್ಲಿ ಕೈಗಾರಿಕಾ ಟೌನ್ಶಿಪ್ಗೆ 1 ಸಾವಿರ ಎಕರೆ ಭೂಸ್ವಾಧೀನಕ್ಕೆ ಕ್ರಮ ವಹಿಸಲಾಗಿದೆ. ಈಗಾಗಲೇ 400 ಎಕರೆ ಭೂಸ್ವಾಧೀನ ಪ್ರಗತಿಯಲ್ಲಿದೆ ಎಂದು ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.