

ಬಾಗಲಕೋಟೆ: ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಓಆರ್.ಎಸ್ ಪಾಕೀಟ ವಿತರಿಸುವ ಮೂಲಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆರೋಗ್ಯದ ಸಲಹೆಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.
ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಉಷ್ಣಾಂಶದ ಪ್ರಮಾಣ ಹೆಚ್ಚಾಗುತ್ತಿದ್ದು, ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಒಳಾಂಗಣ ಹಾಗೂ ಹೊರಾಂಗಣ ಪ್ರದೇಶಗಳಲ್ಲಿ ಉಷ್ಣತೆಯ ಒತ್ತಡದಿಂದ ಒತ್ತಡದಿಂದ ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿವೆ. ತೀವ್ರ ಜ್ವರ, ಕೈ-ಕಾಲುಗಳು ಹಾಗೂ ಮೊಣಕಾಲುಗಳ ಸೆಳೆತ, ಪ್ರಜ್ಞೆ ತಪ್ಪುವುದು, ಸುಸ್ತು ಉಂಟಾಗುತ್ತದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳ ಮೂಲಕ ಜನರಲ್ಲಿ ವಿವಿಡೆದೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ನರೇಗಾದಡಿ ವಿವಿದೆಡೆ ಕೆಲಸ ಮಾಡುವ ಕೂಲಿ ಕಾರ್ಮಿಕರ ಸ್ಥಳಗಳಿಗೆ ಭೇಟಿ ನೀಡಿ ಆರೋಗ್ಯದ ಸಲಹೆಗಳನ್ನು ತಿಳಿಸುವದಲ್ಲದೇ ಓಆರ್‌ಎಸ್ ಪಾಕೀಟಗಳನ್ನು ಸಹ ವಿತರಿಸುತ್ತಿದ್ದಾರೆ. ವಿವಿಧ ಗ್ರಾಮಗಳಿಗೆ ಸಹ ತೆರಳಿ ಸಾರ್ವಜನಿಕರಿಗೆ ಆರೋಗ್ಯ ಶಿಕ್ಷಣ ನೀಡಲಾಗುತ್ತಿದೆ. ಅಲ್ಲದೇ ಚುನಾವಣೆ ಹಿನ್ನಲೆಯಲ್ಲಿ ಜಿಲ್ಲೆಯಾದ್ಯಂತ ಸ್ಥಾಪಿಸಲಾದ ವಿವಿಧ ಚೆಕ್‌ಪೋಸ್ಟಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಆಶಾ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಮುಂಜಾಗ್ರತಾ ಕ್ರಮವಾಗಿ ಓಆರ್‌ಎಸ್ ಪಾಕೀಟಗಳನ್ನು ವಿತರಿಸುವ ಕೆಲಸ ಮಾಡುತ್ತಿದ್ದಾರೆ.