ಹೆಚ್ಚು ರೈತರನ್ನು ಬೆಳೆ ವಿಮೆಗೆ ನೋಂದಾಯಿಸಿ

FotoJet
Published on

 ಅಧಿಕಾರಿಗಳಿಗೆ ಉಸ್ತುವಾರಿ ಕಾರ್ಯದರ್ಶಿ ಮಂಜುಳಾ ಸಲಹೆ | 2023-24ನೇ ಸಾಲಿನ ಪರಿಹಾರದ ಹಣ ಜಮಾ

ಚಿಕ್ಕಬಳ್ಳಾಪುರ : ಬೆಳೆ ವಿಮೆ ಯೋಜನೆಗೆ ಹೆಚ್ಚಿನ ರೈತರನ್ನು ನೋಂದಾಯಿಸಲು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎನ್. ಮಂಜುಳಾ ಸಲಹೆ ನೀಡಿದರು.

ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರಸಕ್ತ 2023-24ನೇ ಸಾಲಿನಲ್ಲಿ ಬೆಳೆ ವಿಮೆ ಮಾಡಿಸಿದ್ದ ಸಂತ್ರಸ್ತ ರೈತರ ಖಾತೆಗಳಿಗೆ ರೂ. 4442.46 ಲಕ್ಷ ರೂ. ವಿಮಾ ಹಣ ಜಮೆ ಆಗಿದೆ. 2024-25ನೇ ಸಾಲಿನಲ್ಲಿ 64162 ರೈತರು ಬೆಳೆ ವಿಮೆಗೆ ಜಿಲ್ಲೆಯಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಪ್ರಸ್ತುತ ಬೆಳೆ ವಿಮೆಗೆ ಕಾಲಾವಕಾಶವಿದ್ದು, ಕಷಿ ಮತ್ತು ತೋಟಗಾರಿಕೆಯ ಹೆಚ್ಚಿನ ಬೆಳೆಗಳಿಗೆ ಬೆಳೆ ವಿಮೆ ಮಾಡಿಸಲು ತೀರ್ಮಾನಿಸಲಾಗಿದೆ ಎಂದರು.

ಸಭೆಯಲ್ಲಿ ಜಿಪಂ ಸಿಇಒ ಪ್ರಕಾಶ್ ಜಿ.ಟಿ. ನಿಟ್ಟಾಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ, ಅಪರ ಜಿಲ್ಲಾಧಿಕಾರಿ ಎನ್.ಭಾಸ್ಕರ್ ಮತ್ತಿತರರು ಇದ್ದರು.

12,569 ಟನ್ ಗೊಬ್ಬರ ಲಭ್ಯ

ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಜಾವೀದಾ ಬೇಗಂ ಮಾತನಾಡಿ, ಕಳೆದ ಜೂನ್‌ನಿಂದ ಅಕ್ಟೋಬರ್‌ವರೆಗೆ 145 ಮಿಮೀ ವಾಡಿಕೆ ಮಳೆಗೆ ಬದಲಾಗಿ 208 ಮಿಮೀ ಮಳೆ ಬಿದ್ದಿದ್ದು, ಶೇ.44ರಷ್ಟು ಹೆಚ್ಚುವರಿ ಮಳೆಯಾಗಿದೆ ಎಂದು ಮಾಹಿತಿ ನೀಡಿದರು.

ಮುಂಗಾರು ಹಂಗಾಮಿನಲ್ಲಿ 1,20,621 ಹೆಕ್ಟೇರ್ ಪ್ರದೇಶಗಳಲ್ಲಿ ಬಿತ್ತನೆ (ಶೇ. 94.24ರಷ್ಟು) ಕಾರ್ಯವಾಗಿದ್ದು ಇದಕ್ಕೆ ಪೂರಕವಾಗಿ 14,826 ಮೆಟ್ರಿಕ್ ಟನ್ ರಸಗೊಬ್ಬರ ಪೂರೈಸಿದ್ದು, ಪ್ರಸ್ತುತ 12,569 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಲಭ್ಯವಿದೆ ಎಂದು ತಿಳಿಸಿದರು.

ಈ ಬಾರಿಯ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆಯಲ್ಲಿ ಶೇ. 99.17ರಷ್ಟು ಪ್ರಗತಿ ಸಾಧಿಸಲಾಗಿದೆ. ಇದಕ್ಕಾಗಿ ಜಿಲ್ಲೆಯಲ್ಲಿ 672 ಜನರನ್ನು ನಿಯೋಜಿಸಿದ್ದು 5,99,849 ರೈತರ ತಾಕುಗಳ ಮಾಹಿತಿಯನ್ನು ತಂತ್ರಾಂಶಕ್ಕೆ ನಮೂದಿಸಲಾಗಿದೆ. 1514 ತಾಕುಗಳ ರೈತರು ಮೊಬೈಲ್ ಮೂಲಕವೇ ವಿವರವನ್ನು ತಂತ್ರಾಂಶದಲ್ಲಿ ದಾಖಲಿಸಿ ಬೆಳೆ ಸಮೀಕ್ಷೆ ಕೈಗೊಂಡಿದ್ದಾರೆ ಎಂದು ಮಾಹಿತಿ ನೀಡಿದರು.

ಮಳೆ ಹಾನಿ ಸಮಸ್ಯೆ

ಪ್ರಸಕ್ತ ಸಾಲಿನಲ್ಲಿ ಅಧಿಕ ಮಳೆಗೆ 43 ಮನೆಗಳು ಪೂರ್ಣವಾಗಿ ಹಾನಿಗೊಳಗಾಗಿದ್ದು, ಈ ಪೈಕಿ 38 ಸಂತ್ರಸ್ತರಿಗೆ 45.6 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ. 92 ಮನೆಗಳು ಭಾಗಶಃ ಹಾನಿಯಾಗಿದ್ದು, 87 ಸಂತ್ರಸ್ತರಿಗೆ 5.6 ಲಕ್ಷ ರೂ ಪರಿಹಾರ ಸಿಕ್ಕಿದೆ. 31.46 ಹೆಕ್ಟೇರ್ ಪ್ರದೇಶದ ಕಷಿ ಬೆಳೆಗಳು ಹಾಗೂ 73.9 ಹೆಕ್ಟೇರ್ ಪ್ರದೇಶದ ತೋಟಗಾರಿಕಾ ಬೆಳೆಗಳು, 64 ವಿದ್ಯುತ್ ಕಂಬಗಳು, 7 ಪರಿವರ್ತಕ ಸ್ಥಾವರಗಳು ಮಳೆಯಿಂದ ಹಾನಿಗೀಡಾಗಿವೆ ಎಂದು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ತಿಳಿಸಿದರು.

ಹಲವೆಡೆ ನೀರಿನ ಸಮಸ್ಯೆ

ಮಳೆ ಪ್ರಮಾಣ ಹೆಚ್ಚಾಗಿದ್ದರೂ ಜಿಲ್ಲೆಯ 23 ಗ್ರಾಮಗಳಲ್ಲಿ ಮತ್ತು ನಗರ, ಪಟ್ಟಣ ಪ್ರದೇಶಗಳ ವ್ಯಾಪ್ತಿಯ 26 ವಾರ್ಡ್‌ಗಳಲ್ಲಿ ಪ್ರಸ್ತುತ ಕುಡಿಯುವ ನೀರಿನ ಅಭಾವವಿದ್ದು ಖಾಸಗಿ ಕೊಳವೆಬಾವಿ ನೀರು ಪೂರೈಸಲಾಗುತ್ತಿದೆ. ಮುಂಬರುವ 33 ವಾರಗಳಿಗೆ ಆಗುವಷ್ಟು 420793 ಮೆಟ್ರಿಕ್ ಟನ್ ಜಾನುವಾರು ಮೇವು ಲಭ್ಯವಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಜಲಜೀವನ್ ಮಿಷನ್ ಯೋಜನೆಯಡಿ ಜಿಲ್ಲೆಯಲ್ಲಿ 1640 ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, ಈ ಪೈಕಿ 91 ಪೂರ್ಣಗೊಂಡಿವೆ. ಮುಂಬರುವ ದಿನಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಬಹುದಾದ 17 ಗ್ರಾಮಗಳ ಪೈಕಿ 13 ಗ್ರಾಮಗಳಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net