

ಬನ್ನೂರು: ಪಟ್ಟಣದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಸಮೀಪದ ಮಾಕನಹಳ್ಳಿಯ ಹೆಗ್ಗೆರೆಯ ಕೋಡಿ ಒಡೆದು ನೀರಿನ ರಭಸಕ್ಕೆ ರಸ್ತೆ, ಪೈಪ್ ಕೊಚ್ಚಿ ಹೋಗಿದೆ.
ಭಾರಿ ಮಳೆಯಿಂದಾಗಿ ಹೆಗ್ಗೆರೆ ತುಂಬಿ ಕೋಡಿ ಒಡೆದು ಇತರ ನಾಲೆಗಳಿಗೆ ಸಂಪರ್ಕ ನೀಡಲಾಗಿದ್ದ ಪೈಪ್‌ಲೈನ್ ಸಮೇತ ಕೊಚ್ಚಿ ಹೋಗುವುದರ ಜತೆಗೆ ಬೀಡನಹಳ್ಳಿಯಿಂದ ಮಾಕನಹಳ್ಳಿವರವಿಗೂ ನೀರಿನ ರಭಸಕ್ಕೆ ರಸ್ತೆ ಇಲ್ಲದಂತಾಗಿದ್ದು, ಬೀಡನಹಳ್ಳಿಯಿಂದ ಮಾಕನಹಳ್ಳಿಗೆ ಸಂಪರ್ಕ ಸ್ಥಗಿತವಾಗಿದೆ.
ವಿಚಾರ ತಿಳಿದು ಸ್ಥಳಕ್ಕೆ ಭೇಟಿ ನೀಡಿದ್ದ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಕೂಡಲೇ ಕಾಮಗಾರಿ ಕೈಗೊಂಡು ರೈತರ ಸಮಸ್ಯೆಯನ್ನು ಪರಿಹರಿಸುವುದಾಗಿ ತಿಳಿಸಿದರು.
ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರ ಜಯಂತ್ ಮಾತನಾಡಿ, ನಿರಂತರವಾಗಿ ಸುರಿದ ಮಳೆಯಿಂದಾಗಿ ನೀರಿನ ಒತ್ತಡ ಹೆಚ್ಚಾಗಿ ಈ ಸಮಸ್ಯೆ ಉದ್ಭವವಾಗಿದ್ದು, ಈ ವಿಚಾರ ಈಗಾಗಲೇ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮತ್ತು ಸಂಸದ ಸುನೀಲ್‌ಬೋಸ್ ಅವರ ಗಮನಕ್ಕೆ ಬಂದಿದೆ. ಅವರ ಆದೇಶದಂತೆ ಕಾಮಗಾರಿ ನಡೆಸಿ ಸಮಸ್ಯೆಯನ್ನು ಪರಿಹರಿಸಿಕೊಡುವ ಭರವಸೆ ನೀಡಿದರು.
ಸಹಾಯಕ ಕಾರ್ಯಪಾಲಕ ಅಭಿಯಂತರ ಲೋಹಿತ್, ಗ್ರಾಮದ ಮುಖಂಡರು ಹಾಜರಿದ್ದರು.