ಹೃದಯಾಘಾತದಿಂದ ಮೆಡಿಕಲ್ ವಿದ್ಯಾರ್ಥಿ ಸಾವು

bkt-30-14
ಲಕ್ಷ್ಮೀ ಪುತ್ರ
Published on

ಬಾಗಲಕೋಟೆ: ಬಾಗಲಕೋಟೆ ಬಿವಿವಿ ಸಂಘದ ಎಸ್.ನಿಜಲಿಂಗಪ್ಪ ಮೆಡಿಕಲ್ ಕಾಲೇಜಿನಲ್ಲಿ ನಾಲ್ಕುವರೆ ವರ್ಷ ಎಂಬಿಬಿಎಸ್ ಮುಗಿಸಿ ಇಂಟರ್ ಶಿಪ್‌ನಲ್ಲಿ ಇದ್ದ ವಿದ್ಯಾರ್ಥಿ ಲಕ್ಷ್ಮೀಪುತ್ರ ಬಿ.ಕುಲಕರ್ಣಿ (೨೪) ಸೋಮವಾರ ಬೆಂಗಳೂರಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಎರಡು ದಿನಗಳ ಹಿಂದಷ್ಟೆ ರಜೆ ಮೇಲೆ ಸಂಬಂಧಿಕರ ಜೊತೆ ಬೆಂಗಳೂರಗೆ ಹೋಗಿದ್ದ. ಅಲ್ಲಿಂದ ತಮಿಳುನಾಡಿಗೆ ಪ್ರವಾಸಕ್ಕೆ ಹೋಗಿ ವಾಪಸ್ಸು ಬರುತ್ತಿದ್ದಾಗ ಆರೋಗ್ಯದಲ್ಲಿ ಏರುಪೇರಾಗಿ ಬೆಂಗಳೂರ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಷ್ಟರಲ್ಲೆ ಯುವಕ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಹೃದಯಾಘಾತದಿಂದ ಸಾವನ್ನಪ್ಪಿರುವ ಲಕ್ಷೀಪುತ್ರ ಮೂಲತಃ ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಕುಮಸಗಿ ಗ್ರಾಮದವರು. ಮೆಡಿಕಲ್ ಓದಲು ಬಾಗಲಕೋಟೆ ಬಿವಿವಿ ಸಂಘದ ಎಸ್.ನಿಜಲಿಂಗಪ್ಪ ಮೆಡಿಕಲ್ ಕಾಲೇಜ್‌ನಲ್ಲಿ ಪ್ರವೇಶ ಪಡೆದಿದ್ದರು. ೨೦೧೯-೨೦ನೇ ಸಾಲಿನಲ್ಲಿ ಎಂಬಿಬಿಎಸ್ ಪವೇಶ ಪಡೆದು, ಈಗಾಗಲೇ ನಾಲ್ಕುವರೆ ವರ್ಷ ಅಧ್ಯಯನ ಮುಗಿಸಿ ಸದ್ಯ ಇಂಟರ್‌ಶಿಪ್‌ನಲ್ಲಿ ಇದ್ದರು. ಇದೇ ಜುಲೈ ೧೦ಕ್ಕೆ ಇಂಟರ್‌ಶಿಪ್ ಪೂರ್ಣಗೊಂಡು ವೈದ್ಯಕೀಯ ಸೇವೆಗೆ ಅಣಿಯಾಗಬೇಕಿದ್ದ ಲಕ್ಷ್ಮೀ ಪುತ್ರ ಇದೀಗ ಹೃದಯಾಘಾತಕ್ಕೆ ಒಳಗಾಗಿ ಪ್ರಾಣ ಬಿಟ್ಟಿದ್ದಾರೆ.

ಇತ್ತೀಚಿಗೆ ಯುವಕರಲ್ಲಿ ಹೆಚ್ಚು ಹೃದಯ ಸಂಬಂಧಿಸಿದಂತೆ ಕಾಯಿಲೆ ಕಾಣಿಸಿಕೊಂಡು ಹೃದಯಾಘಾತಕ್ಕೆ ಒಳಗಾಗುತ್ತಿರುವ ಪ್ರಕರಣ ಹೆಚ್ಚುತ್ತಿರುವ ಬೆನ್ನಲ್ಲೆ ಇದೀಗ ಮೆಡಿಕಲ್ ಕಾಲೇಜ್ ವಿದ್ಯಾರ್ಥಿ ಇನ್ನೇನು ವೃದ್ಯಕೀಯ ಶಿಕ್ಷಣ ಮುಗಿಸಿ, ತನ್ನ ಹಾಗೂ ತನ್ನ ಕುಟುಂಬ ಸದಸ್ಯರ ಕನಸು ನನಸು ಮಾಡುವ ಕ್ಷಣದಲ್ಲೆ ವಿಧಿ ಹೃದಯಾಘಾತಕ್ಕೆ ಸಿಲುಕಿಸಿ ಬಾರದ ಲೋಕಕ್ಕೆ ಕರೆದುಕೊಂಡು ಹೋಗಿದೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net