ಹೂವು ಬಿಟ್ಟ ಮಾವು…

6mnd1
Published on

ವಿಜಯವಾಣಿ ವಿಶೇಷ ಮುಂಡಗೋಡ

ಹಣ್ಣುಗಳ ರಾಜ ಎಂದೇ ಪ್ರಸಿದ್ಧಿ ಪಡೆದ ಮಾವಿನ ಮರಗಳಲ್ಲಿ ಹೂವು ಚೆನ್ನಾಗಿ ಬಿಟ್ಟಿದ್ದು, ಮೂರು ತಿಂಗಳಲ್ಲಿ ಫಸಲು ಕೈಗೆ ಬರುವ ನಿರೀಕ್ಷೆಯಲ್ಲಿ ರೈತರಿದ್ದಾರೆ.

ಆದರೆ, ಈ ಬಾರಿ ಅಕಾಲಿಕ ಮಳೆ ಹಾಗೂ ಮೋಡ ಮುಸುಕಿದ ವಾತಾವರಣದಿಂದ ಬೂದುರೋಗ ಮತ್ತು ಕೀಟ ಬಾಧೆ ಹೆಚ್ಚಾಗಿದೆ. ಮಾವಿನ ಹೂವು ಕಾಯಿ ಕಟ್ಟುವ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಇದೆ ಎಂಬುದು ರೈತರ ಅಭಿಪ್ರಾಯ.

ತಾಲೂಕಿನಲ್ಲಿ ಅಂದಾಜು 850 ಹೆಕ್ಟೇರ್ ಪ್ರದೇಶದಲ್ಲಿ ರೈತರು ಮಾವು ಬೆಳೆದಿದ್ದಾರೆ. ಪಾಳಾ ಗ್ರಾಮದ ಸುತ್ತಮುತ್ತ ಅತಿ ಹೆಚ್ಚು ಮಾವಿನ ತೋಟಗಳಿವೆ. ಇಲ್ಲಿನ ಮಣ್ಣಿನ ಗುಣ ಮತ್ತು ಹವಾಮಾನದ ಪೂರಕ ವಾತಾವರಣದಿಂದ ಆಪೂಸ್, ರಸಪೂರಿ, ತೋತಾಪೂರಿ ಹಣ್ಣುಗಳನ್ನು ಹೆಚ್ಚಾಗಿ ಬೆಳೆಯುತ್ತಾರೆ. ಹೂವು ಬಿಟ್ಟಿರುವ ಈ ಸಮಯದಲ್ಲಿಯೇ ಮಳೆ ಮತ್ತು ಹವಾಮಾನದ ಏರು-ಪೇರಿನಿಂದ ಮಾವಿನ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಅಲ್ಲದೆ, ಮುಂದೆ ಮಳೆ-ಗಾಳಿ, ಇಬ್ಬನಿ ದಾಟಿಕೊಂಡು ಬರಬೇಕು. ಕಟಾವಿಗೆ ಬರುವ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ದೊಡ್ಡ ಮಳೆ-ಗಾಳಿ ಬಿಟ್ಟರೆ ಕಾಯಿಗಳು ನೆಲಕಚ್ಚುತ್ತವೆ.

ನನ್ನ ಎರಡು ಎಕರೆ ತೋಟದಲ್ಲಿ ಆಪೂಸ್ ತಳಿಯ ಮಾವಿನ ಗಿಡಗಳಿವೆ. ಕಳೆದ ಎರಡು ವರ್ಷಕ್ಕಿಂತ ಈ ಬಾರಿ ಜಾಸ್ತಿ ಹೂವು ಬಿಟ್ಟಿದೆ. ಕ್ರಮೇಣ ಮಾವಿನ ಬೆಳೆಯಲ್ಲಿ ಲಾಭ ಕಡಿಮೆಯಾಗುತ್ತಿದೆ. ಹೂವು ಬಿಟ್ಟಾಗ ಗುತ್ತಿಗೆದಾರರು ಅರ್ಧ ದುಡ್ಡು ಕೊಟ್ಟಿರುತ್ತಾರೆ. ನಂತರ ಮಳೆ-ಗಾಳಿಗೆ ಸಿಕ್ಕು ಕಾಯಿಗಳು ಉದುರಿದಾಗ ಬಾಕಿ ದುಡ್ಡು ಕೊಡುವುದಿಲ್ಲ. ಹಾಗಾಗಿ ರೈತರು ಮಾವಿನ ಬೆಳೆ ಬಿಟ್ಟು ಬೇರೆ ಬೆಳೆಯತ್ತ ಮುಖ ಮಾಡುತ್ತಿದ್ದಾರೆ. | ಸಿದ್ದನಗೌಡ ಪಾಟೀಲ ಹುನಗುಂದ ರೈತ

ಈ ಬಾರಿ ಮಾವಿನ ಗಿಡಗಳಲ್ಲಿ ಚೆನ್ನಾಗಿ ಹೂವು ಬಿಟ್ಟಿವೆ. ಕಳೆದ ವರ್ಷಕ್ಕಿಂತ ಇಳುವರಿ ಜಾಸ್ತಿ ಆಗಬಹುದು. ಆದರೆ, ಅಕಾಲಿಕ ಮಳೆಯಾಗುತ್ತಿರುವುದರಿಂದ ಜಿಗಿ ಹುಳು ಕಾಟ ಹೆಚ್ಚಬಹುದು. ನಿಯಂತ್ರಣಕ್ಕೆ ರೈತರು ಮೆಲಾಥಿಯಾನ್ ಔಷಧ ಸಿಂಪಡಿಸಬೇಕು. | ಅಣ್ಣಪ್ಪ ನಾಯ್ಕ ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net