ಹೂಮಾಲೆಯ ದಾರದಂತೆ ಅದ್ವೆತ ತತ್ವ

FotoJet (3)
Published on

ವಿಧುಶೇಖರ ಭಾರತೀ ಸ್ವಾಮೀಜಿ ಅಭಿಮತ | ವಿವಿಧ ಆಚಾರ, ವಿಚಾರಗಳನ್ನು ಒಗ್ಗೂಡಿಸಿದ ಸಿದ್ಧಾಂತ |ಶಿಡ್ಲಘಟ್ಟದಲ್ಲಿ ಶ್ರೀ ಆದಿಶಂಕರ ಸಭಾಭವನ ಲೋಕಾರ್ಪಣೆ

ಶಿಡ್ಲಘಟ್ಟ : ವಿಧದ ಪರಿಮಳ ಹಾಗೂ ಬಣ್ಣಗಳ ಹೂವುಗಳನ್ನು ಸೇರಿಸಿ ಸುಂದರ ಮಾಲೆಯನ್ನಾಗಿ ಮಾಡಲು ಕಣ್ಣಿಗೆ ಕಾಣದ ಸೂತ್ರ ಅಥವಾ ದಾರ ಇರಬೇಕು. ಶ್ರೀ ಶಂಕರರ ಅದ್ವೆತ ತತ್ವ ಕೂಡ ಈ ಸೂತ್ರದ ಹಾಗೆ ಎಲ್ಲ್ಲ ಸಂಪ್ರದಾಯ, ಭಗವಂತನ ಆರಾಧನೆ, ನಂಬಿಕೆ, ಆಚರಣೆ, ಧರ್ಮಗಳ ನಾನಾ ಮಾರ್ಗಗಳನ್ನು ಒಗ್ಗೂಡಿಸಿದೆ ಎಂದು ಶ್ರೀ ಶೃಂಗೇರಿ ಶಾರದಾ ಪೀಠದ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ತಿಳಿಸಿದರು.

ನಗರದ ಶಂಕರಮಠ ರಸ್ತೆಯಲ್ಲಿರುವ ಶ್ರೀ ಆದಿಶಂಕರ ಸಭಾಭವನವನ್ನು ಶುಕ್ರವಾರ ಲೋಕಾರ್ಪಣೆ ಮಾಡಿ ಆಶೀರ್ವಚನ ನೀಡಿದರು.

ಅದ್ವೈತ ಸಿದ್ಧಾಂತಕ್ಕೆ ಒಂದು ತಾತ್ವ್ವಿಕ ನೆಲೆಗಟ್ಟನ್ನು ಒದಗಿಸಿ ಕೊಟ್ಟು, ಅದನ್ನು ದರ್ಶನದ ಮಟ್ಟಕ್ಕೆ ಕೊಂಡೊಯ್ದು ಪ್ರಚಾರ ಪಡಿಸಿದವರು ಆದಿ ಶಂಕರರು. ಧರ್ಮ, ಶಾಸ್ತ್ರಗಳಲ್ಲಿ ಯಾವುದೇ ಲೋಪಗಳಿಲ್ಲದೆ ಅದನ್ನು ಪಾಲಿಸುವವರ ಸ್ವಪ್ರತಿಷ್ಟೆಗಳಿಂದ ಪರಸ್ಪರ ದೋಷಾರೋಪಗಳು, ಕಿತ್ತಾಟಗಳು ನಡೆಯುತ್ತಿದ್ದಾಗ, ಇದರಿಂದಾಗುವ ಹಾನಿಗಳನ್ನು ಜನರಿಗೆ ತಿಳಿಸಿ ಧರ್ಮದ ನೈಜ ಉದ್ದೇಶ ತಿಳಿಸಿದವರು ಎಂದರು.

ಜಾತಿ ವ್ಯವಸ್ಥೆಯಲ್ಲಿ ಸಿಲುಕಿ ನರಳುತ್ತಿದ್ದ ಸಮಾಜವನ್ನು ಒಗ್ಗೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಆದಿಶಂಕರಾಚಾರ್ಯರನ್ನು ಈಶ್ವರನ ಅವತಾರವೆಂದೇ ಪರಿಗಣಿಸಲಾಗುತ್ತದೆ. ಚಿಕ್ಕ ವಯಸ್ಸಿನಲ್ಲಿಯೇ ಅನೇಕ ಮಹತ್ತರವಾದ ಕೆಲಸಗಳನ್ನು ಮಾಡಿ, ಧರ್ಮ ಸಂಸ್ಥಾಪನೆಗಾಗಿ, ಧರ್ಮದ ಏಳಿಗೆಗಾಗಿ ಶ್ರಮಿಸಿ ಜಗದ್ಗುರುವಿನ ಸ್ಥಾನಕ್ಕೇರಿದವರು ಶಂಕರಾಚಾರ್ಯರು. ಭಾರತದ ನಾಲ್ಕು ಮೂಲೆಗಳಲ್ಲಿ ನಾಲ್ಕು ಮಠಗಳನ್ನು ಸ್ಥಾಪಿಸಿದರು. ಈ ನಾಲ್ಕು ಮಠಗಳು ಇಂದಿಗೂ ಧರ್ಮದ ಪ್ರಚಾರ ಮಾಡುತ್ತಿವೆ ಎಂದರು.

ಆದಿ ಶಂಕರಾಚಾರ್ಯರು 32 ವರ್ಷಗಳ ಅಲ್ಪಾವಧಿಯಲ್ಲಿ ಅನೇಕ ಕೃತಿಗಳನ್ನು ರಚಿಸಿದರು. ಅವು ಅದ್ವೈತ ಸಿದ್ಧಾಂತದ ಮೇಲೆ ಕೇಂದ್ರೀಕೃತವಾಗಿದೆ. ಚಿತ್ತ ಶುದ್ಧಿಗಾಗಿ ಭಕ್ತಿಯ ಬೀಜವನ್ನು ಬಿತ್ತಿದರು. ಬ್ರಹ್ಮಸೂತ್ರ ಭಾಷ್ಯ, ಉಪನಿಷತ್ ಭಾಷ್ಯ, ಶಿವಾನಂದ ಲಹರಿ, ಸೌಂದರ್ಯ ಲಹರಿ, ಆನಂದ ಲಹರಿ, ಅಷ್ಟಕಗಳು, ಭಕ್ತಿ ಸ್ತೋತ್ರ, ಧ್ಯಾನ, ಪದ್ಯಗಳನ್ನು ರಚಿಸಿದರು. ಭಜ ಗೋವಿಂದಂ, ಭಜ ಗೋವಿಂದ, ಗೋವಿಂದಂ ಭಜ ಮೂಢಮತೆ ಇದು ಶಂಕರಾಚಾರ್ಯರು ರಚಿಸಿದ ಜನಪ್ರಿಯ ಭಜನೆಯಾಗಿದೆ ಎಂದರು.

ಅರವತ್ತೈದು ವರ್ಷಗಳ ಹಿಂದೆ ಶೃಂಗೇರಿ ಮಠಾಧೀಶರು ಶಿಡ್ಲಘಟ್ಟದಲ್ಲಿ ವಾಸ್ತವ್ಯ ಮಾಡಿದ್ದರು. ಕಳೆದ ಎರಡು ವರ್ಷಗಳ ಹಿಂದೆ ಇಲ್ಲಿಗೆ ಬಂದಿದ್ದಾಗ ಸಭಾಭವನ ನಿರ್ಮಾಣದ ಬಗ್ಗೆ ಮಾಹಿತಿ ನೀಡಿದ್ದರು. ಇದೀಗ ಆದಿ ಶಂಕರ ಸಭಾಭವನ ಲೋಕಾರ್ಪಣೆಯಾಗಿರುವುದು ಹರ್ಷವಾಗಿದೆ ಎಂದರು.

ಸ್ವಾಗತ ಸಮಿತಿ ಅಧ್ಯಕ್ಷ ವಕೀಲ ಬಿ.ಸಿ. ಸೀತಾರಾಮರಾವ್, ಶ್ರೀ ಶೃಂಗೇರಿ ಶಂಕರಮಠ ಅಭಿವೃದ್ಧಿ ಮತ್ತು ಸೇವಾ ಟ್ರಸ್ಟ್ ಮತ್ತು ತಾಲೂಕು ಬ್ರಾಹ್ಮಣ ಮಹಾಸಭಾ ಪದಾಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net