ಹುಲಿಕೆರೆ ಗ್ರಾಪಂ ಮುಂದೆ ಪ್ರತಿಭಟನೆ

21-08--krs1
Published on

ಕೆ.ಆರ್.ಸಾಗರ: ಮನೆ ಕಟ್ಟಲು ಅನುದಾನ ಕೊಡಿಸುವುದಲ್ಲದೆ, ಮನೆ ಕಟ್ಟಿ ಕೊಡುವುದಾಗಿ 1.75 ಲಕ್ಷ ರೂ. ಪಡೆದು ವಂಚಿದ್ದಾರೆ ಎಂದು ಹುಲಿಕೆರೆ ಗ್ರಾಮ ಪಂಚಾಯಿತಿ ಸದಸ್ಯ ರಾಮು ವಿರುದ್ಧ ಎಂಎನ್‌ಪಿಎಂ ಕಾಲನಿ ನಿವಾಸಿ ಮರಿಯಾ ತಂಗಮ್ಮ ಆರೋಪಿಸಿ, ಸೋಮವಾರ ಹುಲಿಕೆರೆ ಗ್ರಾಪಂ ಕಚೇರಿ ಮುಂದೆ ಸಾರ್ವಜನಿಕರ ಜತೆಗೂಡಿ ಧರಣಿ ನಡೆಸಿದರು.


ಹುಲಿಕೆರೆ ಗ್ರಾಪಂ ಸದಸ್ಯ ರಾಮು ವರ್ಷದ ಹಿಂದೆ ಸರ್ಕಾರದ ಬಸವ ವಸತಿ ಯೋಜನೆಯಡಿ ಮನೆ ಕಟ್ಟಲು ಅನುದಾನ ಕೊಡಿಸುತ್ತೇನೆ, ನಾನೇ ನಿಮ್ಮ ಮನೆಯನ್ನೂ ಕಟ್ಟಿಸಿಕೊಡುತ್ತೇನೆಂದು 1.75 ಲಕ್ಷ ರೂ. ಪಡೆದು ಪ್ರಾರಂಭಿಕ ಕೆಲಸ ಮಾಡಿ ಮನೆ ಕಟ್ಟಿಕೊಡದೆ ಮೋಸ ಮಾಡಿದ್ದಾರೆಂದು ಮರಿಯಾ ತಂಗಮ್ಮ ಆಪಾದಿಸಿದರು.


ಪ್ರಾರಂಭಿಕವಾಗಿ ಗೀಡೆ ಕಟ್ಟಿದ್ದು, ಅದಕ್ಕೆ ಸರ್ಕಾರದಿಂದ 30 ಸಾವಿರ ರೂ. ಬಿಡುಗಡೆಯಾಗಿದೆ. ವರ್ಷ ಕಳೆದರೂ ಮನೆ ಪೂರ್ಣಗೊಳಿಸದ ಕಾರಣ ನಾನು ಹಣ ಕೇಳಿದರೂ ವಾಪಸ್ ನೀಡುತ್ತಿಲ್ಲ, ಫೋನ್ ಮಾಡಿದರೂ ರಿಸೀವ್ ಮಾಡುತ್ತಿಲ್ಲ ಎಂದು ಆರೋಪಿಸಿದರು.


ಮನೆ ಪೂರ್ಣಗೊಳಿಸದ ಹಾಗೂ ಹಣ ವಾಪಸ್ ನೀಡದ ರಾಮು ವಿರುದ್ಧ ಗ್ರಾಪಂ ಹಿರಿಯ ಅಧಿಕಾರಿಗಳು ಕಾನೂನು ಕ್ರಮ ಜರುಗಿಸುಂತೆ ಮನವಿ ನೀಡಿದ್ದೇನೆ. ಅವರು ಕ್ರಮ ಜರುಗಿಸದಿದ್ದರೆ ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ಕುಳಿತು ನ್ಯಾಯ ಸಿಗುವವರೆಗೂ ಹೋರಾಟ ಮಾಡುತ್ತೇನೆ. ಪೊಲೀಸ್ ಠಾಣೆಗೂ ದೂರು ಕೊಡುತ್ತೇನೆ ಎಂದರು.


ಮರಿಯಾ ತಂಗಮ್ಮ ಅವರಿಂದ ಮನವಿ ಸ್ವೀಕರಿಸಿ ಮಾತನಾಡಿದ ಪಿಡಿಒ ನಟೇಶ್, ಈ ಸಂಬಂಧ ಹಿರಿಯ ಅಧಿಕಾರಿಗಳ ಜತೆ ಚರ್ಚಿಸಿ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ. ಪಂಚಾಯಿತಿ ವತಿಯಿಂದ ಬಸವ ವಸತಿ ಯೋಜನೆಯಡಿ ಮೊದಲ ಕಂತಿನ ಹಣ ಬಿಡುಗಡೆಯಾಗಿದೆ. ಅವರಿಬ್ಬರ ವೈಯಕ್ತಿಕ ಹಣದ ವ್ಯವಹಾರ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದರು.


ಸದಸ್ಯತ್ವ ರದ್ದು ಮಾಡಿ: ಕಾಂಗ್ರೆಸ್ ಮುಖಂಡ ಚೆಲುವರಾಜು ಮಾತನಾಡಿ, ಗ್ರಾಪಂ ಸದಸ್ಯ ರಾಮು ಹಲವು ಮಹಿಳೆಯರ ಬಳಿ ಹಣ ಪಡೆದು ಇದೇ ರೀತಿ ಮೋಸ ಮಾಡಿದ್ದಾರೆ. ಈ ಕುರಿತು ಪಿಡಿಒಗೆ ದೂರು ನೀಡಿದ್ದು, ಜಿಪಂ ಸಿಇಒ ತನಿಖೆ ನಡೆಸಿ ಅಮಾಯಕ ಮಹಿಳೆಯರಿಗೆ ಮೋಸ ಮಾಡುತ್ತಿರುವ ರಾಮು ಅವರ ಸದಸ್ಯತ್ವ ರದ್ದು ಮಾಡಬೇಕು ಎಂದು ಆಗ್ರಹಿಸಿದರು.


ತಾಪಂ ಮಾಜಿ ಉಪಾಧ್ಯಕ್ಷ ವೈರಮುಡಿ, ಗ್ರಾಪಂ ಮಾಜಿ ಅಧ್ಯಕ್ಷ ಸಿದ್ದರಾಜು, ಗ್ರಾಪ ಮಾಜಿ ಉಪಾಧ್ಯಕ್ಷ ಚೆಲುವರಾಜು, ರವಿ, ಮುಖಂಡರಾದ ಭರತ್, ಧ್ರುವಕುಮಾರ್, ಗೀತಾ, ಮೀನಾಕ್ಷಿಗೌಡ, ಪೂರ್ಣಿಮಾ, ಜಯಮ್ಮ, ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net