ಹುಲಿ ಪತ್ತೆಗೆ ಕಾರ್ಯಾಚರಣೆ ಆರಂಭ

12 vpt 3.1
Published on

ವಿರಾಜಪೇಟೆ: ಸಮೀಪದ ಮಗ್ಗುಲ, ಐಮಂಗಲ, ಚಂಬೆ ಬೆಳ್ಳೂರು, ಪುದುಕೋಟೆ, ಕುಕ್ಲೂರು ಈ ಭಾಗದಲ್ಲಿ ಒಂದು ವಾರದಿಂದೀಚೆಗೆ ಹುಲಿ ಅಲ್ಲಲ್ಲೆ ಪ್ರತ್ಯಕ್ಷವಾಗುತ್ತಿದ್ದು, ರಸ್ತೆ ಬದಿ ರಾತ್ರಿವೇಳೆ ವಾಹನ ಸವಾರರಿಗೆ ಕಾಣಿಸಿಕೊಂಡು ಗ್ರಾಮಸ್ಥರ ನಿದ್ದೆ ಕೆಡಿಸಿದೆ. ಅಲ್ಲದೇ ಮಗ್ಗುಲ ಮತ್ತು ಐಮಂಗಲ, ಪುದುಕೋಟೆ ಗ್ರಾಮದ ಹಲವರ ಕಾಫಿ ತೋಟ ಮತ್ತು ಗದ್ದೆಗಳಲ್ಲಿ ಹುಲಿ ಹೆಜ್ಜೆಗಳು ಪ್ರತಿನಿತ್ಯ ಗೋಚರವಾಗುತ್ತಿದ್ದು ತೋಟಕ್ಕೆ ಹೋಗಿ ಕೆಲಸ ಮಾಡಲು ಕೂಲಿಕಾರ್ಮಿಕರು ಹಿಂದೇಟು ಹಾಕುವಂತಾಗಿದೆ.

ಈ ನಿಟ್ಟಿನಲ್ಲಿ ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯ ಸಂಕೇತ್ ಪೂವಯ್ಯ ಮತ್ತು ಡಿಸಿಎಫ್ ಜಗನ್ನಾಥ್ ಅವರ ನೇತೃತ್ವದಲ್ಲಿ ಮಗ್ಗುಲ, ಐಮಂಗಲ ಗ್ರಾಮದಲ್ಲಿ ಹುಲಿ ಪತ್ತೆ ಕಾರ್ಯಾಚರಣೆಯನ್ನು ನ.8ರಂದು ಆರಂಭ ಮಾಡಿದ್ದರು. ಆ ಬಳಿಕ ಹುಲಿ ಹೆಜ್ಜೆಗಳು ಮತ್ತು ಘರ್ಜಿಸುವುದು ಪುದುಕೋಟೆ ಗ್ರಾಮದಲ್ಲಿ ಕೇಳಿಬಂದಿದೆ.

ಈ ಹಿನ್ನೆಲೆಯಲ್ಲಿ ಮಂಗಳವಾರ ಚಂಬೆಬೆಳ್ಳೂರು ಗ್ರಾಮದ ಭದ್ರಕಾಳಿ ದೇವಾಲಯದ ಬಳಿ ಸಭೆ ಸೇರಿದ ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ ಹಾಗೂ ಡಿಸಿಎಫ್ ಜಗನ್ನಾಥ್ ಮತ್ತು ಗ್ರಾಮಸ್ಥರು ಹುಲಿ ಕಾರ್ಯಾಚರಣೆ ಬಗ್ಗೆ ಕೆಲಹೊತ್ತು ಚರ್ಚಿಸಿದರು. ಬಳಿಕ ಭದ್ರಕಾಳಿ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿ ಪ್ರಸಾದ ವಿತರಿಸಿ ಬಳಿಕ ಹುಲಿ ಪತ್ತೆ ಕಾರ್ಯಾಚರಣೆ ಆರಂಭ ಮಾಡಲಾಯಿತು.

ಎಪ್ಪತ್ತು ಅರಣ್ಯ ಸಿಬ್ಬಂದಿ ಏಳು ತಂಡಗಳನ್ನು ರಚನೆ ಮಾಡಿ ಮಗ್ಗುಲ, ಐಮಂಗಲ, ಪುದುಕೋಟೆ, ಚಂಬೆಬೆಳ್ಳೂರು, ಕುಕ್ಲೂರು, ಬಿಟ್ಟಂಗಾಲ ಗ್ರಾಮದಲ್ಲಿ ಹುಲಿ ಪತ್ತೆ ಕಾರ್ಯಾಚರಣೆ ಆರಂಭ ಮಾಡಲಾಯಿತು. ಪಟಾಕಿ ಸಿಡಿಸುತ್ತಾ, ಪಿಪೀ ಸದ್ದು ಮಾಡುತ್ತಾ ಅರಣ್ಯ ಸಿಬ್ಬಂದಿ ಕಾರ್ಯಾಚರಣೆ ಆರಂಭ ಮಾಡಿದರು. ಭದ್ರಕಾಳಿ ದೇವಾಲಯದ ಪಕ್ಕದ ತೋಟದಲ್ಲಿ ರಸ್ತೆಯಂಚಿನ್ನಲ್ಲಿಯೇ ಹುಲಿ ಹೆಜ್ಜೆಗಳು ಪತ್ತೆಯಾದವು.

ಬಳಿಕ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ಡಿಸಿಎಫ್ ಜಗನ್ನಾಥ್ ಅವರು, ಈ ಭಾಗದಲ್ಲಿ ಹಲವಾರು ದಿನಗಳಿಂದ ಕಾಡುಪ್ರಾಣಿಗಳ ಉಪಟಳ ಅತ್ಯಂತ ಹೆಚ್ಚಾಗಿದೆ. ಕಳೆದ ವಾರ ಮಗ್ಗುಲ ಗ್ರಾಮದಲ್ಲಿ ಹುಲಿ ಇರುವುದು ಖಾತ್ರಿ ಆಗಿದೆ. ನಾವು ಅಲ್ಲಿ ಅಡ್ಡಿಪಡಿಸಿದ್ದರಿಂದ ಅದೇ ಹುಲಿ ಇಲ್ಲಿಗೆ ಬಂದಿರಬಹುದು. ಕಳೆದ 15 ದಿನಗಳಿಂದ ಈ ಭಾಗದಲ್ಲಿ ಹುಲಿಯ ಚಲನವಲನ ಪತ್ತೆಯಾಗಿದೆ. ನಾವು ಈಗ 70 ಸಿಬ್ಬಂದಿಯಿಂದ ಕಾರ್ಯಾಚರಣೆ ಆರಂಭ ಮಾಡಿದ್ದೀವಿ. ಹೆಚ್ಚುವರಿ ಆಗಿ ಬೇಕಾದರೆ ಸಿಬ್ಬಂದಿಯನ್ನು ಕರೆಸಿಕೊಳ್ಳುತ್ತೇವೆ. ಈ ಹುಲಿ ಕ್ಯಾಮರಾದಲ್ಲಿ ಸೆರೆಯಾದ ಕೂಡಲೇ ಹಿಡಿಯಲು ಅನುಮತಿ ಪಡೆಯುತ್ತೇವೆ. ಜನರ ರಕ್ಷಣೆ ನಮ್ಮ ಹೊಣೆ. ಸಾರ್ವಜನಿಕರು ಒಬ್ಬಂಟಿಗಳಾಗಿ ಓಡಾಡಬೇಡಿ. ಹುಲಿ ಇರುವಿಕೆ ಬಗ್ಗೆ ಮಾಹಿತಿ ತಿಳಿದರೆ ಅರಣ್ಯ ಇಲಾಖೆಗೆ ಮಾಹಿತಿ ಕೊಟ್ಟು ಸಹಕರಿಸಿ ಎಂದರು.

ವನ್ಯಜೀವಿ ಮಂಡಳಿಯ ಸದಸ್ಯ ಸಂಕೇತ್ ಪೂವಯ್ಯ ಮಾತನಾಡಿ, ಈ ಭಾಗದಲ್ಲಿ ಹುಲಿ ಸಂಚಾರ ಇರುವ ಬಗ್ಗೆ ಮಾಹಿತಿ ಬಂದಿದೆ. ಅಲ್ಲದೇ ಈ ಭಾಗದಲ್ಲಿ ಕಾಡಾನೆ ಹಾವಳಿಯೂ ಜಾಸ್ತಿಯಿದೆ. ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರ ನಿರ್ದೇಶನದ ಮೇರೆಗೆ ಹುಲಿ ಕಾರ್ಯಾಚರಣೆ ನಡೆಸಲು ಆದೇಶ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಡಿಸಿಎಫ್ ಜಗನ್ನಾಥ್ ಅವರು ಕಾರ್ಯಾಚರಣೆ ನೇತೃತ್ವ ವಹಿಸುವುದಕ್ಕೆ ಬಂದಿದ್ದಾರೆ, ಯಶಸ್ವಿ ಕಾರ್ಯಾಚರಣೆಗೆ ಗ್ರಾಮಸ್ಥರು ಸಹಕರಿಸಬೇಕು ಎಂದು ಮನವಿ ಮಾಡಿದರು.

ಚಂಬೆಬೆಳ್ಳೂರು ಗ್ರಾಮದ ಕೋಳೇರ ರನ್ನ, ಊರಿನ ಮುಖ್ಯಸ್ಥ ಚಾರಿಮಂಡ ಪ್ರಕಾಶ್, ಕೊಳುವಂಡ ಹರೀಶ್, ಉಳಿಯಡ ಜೀವನ್, ಮುತ್ತಪ್ಪ, ನಾಮನಿರ್ದೇಶನ ಪುರಸಭಾ ಸದಸ್ಯ ಶಬರೀಶ್ ಶೆಟ್ಟಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗೋಪಾಲ್, ವಲಯ ಅರಣ್ಯಾಧಿಕಾರಿ ಕೆ.ವಿ.ಶಿವರಾಂ, ಉಪವಲಯ ಅರಣ್ಯಾಧಿಕಾರಿ ಆನೆ ಕಾರ್ಯಪಡೆ ಪ್ರಶಾಂತ್, ಅರಣ್ಯ ರಕ್ಷಕ ನಾಗರಾಜ್ ರಡರಟ್ಟಿ ಅರಣ್ಯ ಸಿಬ್ಬಂದಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net