ಹನಗೋಡು: ಸಮೀಪದ ಕೆ.ಜಿ.ಹೆಬ್ಬನಕುಪ್ಪೆ ತೋಟದಲ್ಲಿ ಹಾಡಹಗಲೇ ಹಸುವಿನ ಮೇಲೆ ಹುಲಿ ದಾಳಿ ನಡೆಸಿ ಕೊಂದುಹಾಕಿದೆ.
ಹನಗೋಡು ಹೋಬಳಿಯ ಕಚುವಿನಹಳ್ಳಿ ಗ್ರಾಮದ ರುಕ್ಮಿಣಿ ಶ್ರೀನಿವಾಸ್ ಅವರಿಗೆ ಸೇರಿದ ಹಸು ಹುಲಿ ದಾಳಿಗೆ ತುತ್ತಾಗಿದ್ದು, ರುಕ್ಮಿಣಿ ಶ್ರೀನಿವಾಸ್ ಅವರು ಎಂದಿನಂತೆ ತಮ್ಮ ಗ್ರಾಮದ ಪಕ್ಕದಲ್ಲಿರುವ ಕೆ.ಜಿ.ಹೆಬ್ಬನಕುಪ್ಪೆಯ ತರಗನ್ ತೆಂಗಿನತೋಟದಲ್ಲಿ ಶನಿವಾರ ಹಸುವನ್ನು ಮೇಯಲು ಬಿಟ್ಟಿದ್ದರು. ಮಧ್ಯಾಹ್ನ 3.30ರಲ್ಲಿ ಹಸುವಿನ ಮೇಲೆ ಹುಲಿ ದಾಳಿ ನಡೆಸಿದೆ. ಹುಲಿ ದಾಳಿ ಕಂಡು ತೋಟದಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರರ ಕೂಗಾಡಿದ್ದರಿಂದ ಪೊದೆಯೊಳಗೆ ಓಡಿದೆ. ದಾಳಿಯಿಂದ ತೀವ್ರವಾಗಿ ಗಾಯಗೊಂಡು ಹಸು ಸ್ಥಳದಲ್ಲೇ ಮೃತಪಟ್ಟಿದೆ.
ವಿಷಯ ತಿಳಿದು ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಹುಲಿ ಸೆರೆಗೆ ಒತ್ತಾಯ: ಕಳೆದೆರಡು ವರ್ಷಗಳಿಂದ ಹುಲಿಯೊಂದು ಈ ಭಾಗದಲ್ಲಿ ಬೀಡು ಬಿಟ್ಟಿದ್ದು, ಕಾಡಂಚಿನ ಗ್ರಾಮಗಳಲ್ಲಿ ಆಗಾಗ್ಗೆ ಕಾಣಿಸಿಕೊಂಡು ಅಕ್ಕಪಕ್ಕದ ಗ್ರಾಮಗಳಲ್ಲಿ ಜಾನುವಾAರುಗಳ ಮೇಲೆ ದಾಳಿ ಮಾಡುತ್ತಿರುವುದರಿಂದ ಈ ಭಾಗದ ಗ್ರಾಮಸ್ಥರನ್ನು ಭಯ ಭೀತರಾಗುತ್ತಿದ್ದಾರೆ. ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಬೋನಿಟ್ಟು ಹುಲಿಯನ್ನು ಸೆರೆ ಹಿಡಿಯಬೇಕೆಂದು ರೈತ ಮುಖಂಡ ಕಚುವಿನಹಳ್ಳಿ ಲೋಕೇಶ್ ಒತ್ತಾಯಿಸಿದ್ದಾರೆ.