

ಗುಂಡ್ಲುಪೇಟೆ: ತಾಲೂಕಿನ ಕಡತಾಳಕಟ್ಟೆ ಹುಂಡಿ ಗ್ರಾಮದಲ್ಲಿ ಹುಲಿ ದಾಳಿಗೆ ಮನೆಯ ಮುಂದೆ ಕಟ್ಟಿಹಾಕಿದ್ದ ಜಾನುವಾರು ಬಲಿಯಾಗಿದೆ.
ಗ್ರಾಮದ ಹೊರ ವಲಯದಲ್ಲಿರುವ ದೇವಪ್ಪ ಅವರ ಮನೆಯ ಮುಂದೆ ಕಟ್ಟಿಹಾಕಿದ್ದ ಹಸುವಿನ ಮೇಲೆ ಸೋಮವಾರ ರಾತ್ರಿ ಹುಲಿ ದಾಳಿ ನಡೆಸಿ ಕೊಂದು ಹಾಕಿದೆ. ಸ್ವಲ್ಪ ದೂರ ಎಳೆದೊಯ್ದು ಹಸುವಿನ ಕುತ್ತಿಗೆ ಹಾಗೂ ಹಿಂಭಾಗವನ್ನು ತಿಂದು ಹಾಕಿದೆ.
ಸ್ಥಳಕ್ಕೆ ಅರಣ್ಯ ಇಲಾಖೆಯ ಬಫರ್ ವಲಯದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಕುಮಾರ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು. ಹುಲಿಯ ಚಲನವಲನ ಪತ್ತೆಗೆ ಕ್ಯಾಮರಾ, ಸೆರೆಗೆ ಬೋನು ಅಳವಡಿಸುವ ಭರವಸೆ ನೀಡಿದರು.
ವನ್ಯಜೀವಿಗಳ ಸೆರೆಗೆ ಒತ್ತಾಯ: ಮಂಗಳವಾರ ಬೆಳಗ್ಗೆ ವಿಷಯ ತಿಳಿದ ಗ್ರಾಮಸ್ಥರು ಭೀತಿಗೊಳಗಾಗಿದ್ದಾರೆ. ಕಳೆದ ಕೆಲವು ತಿಂಗಳಿನಿಂದ ಗ್ರಾಮದಲ್ಲಿ ಚಿರತೆ ಹಾಗೂ ಹುಲಿಗಳ ದಾಳಿಯಿಂದ ಜಾನುವಾರು ಸಾಯುತ್ತಿವೆ. ರೈತರು ತಮ್ಮ ಜಮೀನುಗಳಿಗೆ ಹೋಗಲು ಹೆದರುವಂತಾಗಿದ್ದು, ಕೆಲಸ ಕಾರ್ಯಗಳಿಗೆ ಕಾರ್ಮಿಕರೂ ಬರದಂತಾಗಿದ್ದು, ರೈತರ ಪಾಡು ಅಸಹನೀಯವಾಗುತ್ತಿದೆ. ಈಗ ಹುಲಿ ಗ್ರಾಮಕ್ಕೆ ಬಂದು ಮನೆಯ ಮುಂದೆ ಕಟ್ಟಿಹಾಕಿದ್ದ ಹಸುವನ್ನು ಕೊಂದು ಹಾಕಿದೆ. ಆದ್ದರಿಂದ ಈ ಭಾಗದಲ್ಲಿ ಸಂಚರಿಸುತ್ತಾ ಜನ ಜಾನುವಾರುಗಳಿಗೆ ಮಾರಕವಾದ ಹುಲಿ ಹಾಗೂ ಚಿರತೆಗಳನ್ನು ಸೆರೆಹಿಡಿಯಬೇಕು. ಕೂಡಲೇ ಜಾನುವಾರು ಮಾಲೀಕರಿಗೆ ನಷ್ಟ ಪರಿಹಾರ ಕೊಡಬೇಕು ಎಂದು ಮುಖಂಡರಾದ ಸುನಿಲ್ ಮೂಡ್ಲು, ಶಿವಕುಮಾರ್ ಒತ್ತಾಯಿಸಿದ್ದಾರೆ.