

ಸರಗೂರು: ತಾಲೂಕಿನ ಹಂಚೀಪುರ ಗ್ರಾಮದಲ್ಲಿ ಹುಲಿ ದಾಳಿ ನಡೆಸಿ ಹಸುವನ್ನು ಕೊಂದುಹಾಕಿದೆ.
ಹಂಚೀಪುರ ಗ್ರಾಮದ ರೈತ ಮಲ್ಲಣ್ಣ ಅವರು ಸೋಮವಾರ ಹಸುವನ್ನು ಮೇಯಲು ಬಿಟ್ಟು ಜಮೀನಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದರು. ಈ ಸಂದರ್ಭದಲ್ಲಿ ಹುಲಿ ದಾಳಿ ನಡೆಸಿ ಹಸುವನ್ನು ಕೊಂದು ಹಾಕಿದೆ. ಮನೆಗೆ ಹಸು ಮರಳದ ಕಾರಣ ಹುಡುಕಾಟ ನಡೆಸಿದ್ದರೂ ಹಸು ಕಂಡುಬರಲಿಲ್ಲ. ಮಂಗಳವಾರ ಮಧ್ಯಾಹ್ನ ಜಮೀನಿನ ಬಳಿಯೇ ಹಸುವಿನ ಮೃತದೇಹ ಪತ್ತೆಯಾಗಿದೆ.
ಸ್ಥಳದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಕ್ಯಾಮರಾ ಅಳವಡಿಸಿದ್ದು, ಹುಲಿಯ ಚಲನವಲನದ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.
ಸರಗೂರು ವಲಯ ಸಹಾಯಕ ಆರ್‌ಎಫ್‌ಒ ಅಕ್ಷಯ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪರಿಹಾರ ಕೊಡಿಸುವ ಭರವಸೆ ನೀಡಿದರು.
ಹುಲಿ ಸೆರೆಹಿಡಿಯಲು ಬೋನನ್ನು ಇಡಲಾಗುವುದು, ಹುಲಿ ಚಲನವಲನ ಕಂಡುಬಂದರೆ ಮಾಹಿತಿ ನೀಡುವಂತೆ ತಿಳಿಸಿದರು.