

ಹನೂರು: ಸಮೀಪದ ಉದ್ದನೂರು ಬಳಿಯ ಹುಬ್ಬೆ ಹುಣಸೆ ಡ್ಯಾಂ ಮೂಲಕ ಜಮೀನುಗಳಿಗೆ ನೀರಾವರಿ ಸೌಕರ್ಯ ಒದಗಿಸಿರುವ ನಾಲೆಗಳ ಸ್ಥಳಕ್ಕೆ ಗುರುವಾರ ಶಾಸಕ ಎಂ.ಆರ್.ಮಂಜುನಾಥ್ ಭೇಟಿ ನೀಡಿ ಪರಿಶೀಲಿಸಿದರು.
ಹನೂರು ಸುತ್ತ್ತಲ ಭಾಗದ ರೈತರಿಗೆ ಹುಬ್ಬೆ ಹುಣಸೆ ಡ್ಯಾಂನಿಂದ ನೀರಾವರಿ ಸೌಕರ್ಯವನ್ನು ಒದಗಿಸುವ ಉದ್ದೇಶದಿಂದ ಕಳೆದ 2 ದಶಕದ ಹಿಂದೆ ನಾಲೆಗಳನ್ನು ನಿರ್ಮಿಸಲಾಗಿತ್ತು. ಆದರೆ, ಕೆಲ ಕಾರಣಾಂತರದಿಂದ ನೀರು ಹಾಯಿಸದ ಪರಿಣಾಮ ನಾಲೆಯ ಕೆಲವು ಕಡೆಗಳಲ್ಲಿ ಹೂಳು ಹಾಗೂ ಗಿಡ ಗಂಟಿಗಳು ಬೆಳೆದು ನಿಂತಿದ್ದರೆ, ಬಹುತೇಕ ಕಡೆಗಳಲ್ಲಿ ಮುಚ್ಚಿ ಹೋಗಿತ್ತು. ಇದರಿಂದ ಮಳೆಗಾಲದ ವೇಳೆ ಡ್ಯಾಂ ಭರ್ತಿಯಾದರೂ ಜಮೀನುಗಳಿಗೆ ನೀರೊದಗಿಸಲು ಸಾಧ್ಯವಿರಲಿಲ್ಲ. ಈ ಬಗ್ಗೆ ರೈತರು ಆಕ್ಷೇಪ ವ್ಯಕ್ತಪಡಿಸಿದ್ದರು. ನಾಲೆಗಳಲ್ಲಿ ಸಂಗ್ರಹವಾಗಿರುವ ಹೂಳು ತೆರವುಗೊಳಿಸಿ ಸಮರ್ಪಕ ನೀರಾವರಿ ಸೌಕರ್ಯ ಒದಗಿಸುವಂತೆ ರೈತರು ಶಾಸಕ ಎಂ.ಆರ್.ಮಂಜುನಾಥ್ ಅವರಲ್ಲಿ ಮನವಿ ಮಾಡಿದ್ದರು. ಈ ಬಗ್ಗೆ ಮುತುವರ್ಜಿ ವಹಿಸಿದ ಶಾಸಕರು ನೀರಾವರಿ ಇಲಾಖೆ ಅಧಿಕಾರಿಗಳಿಗೆ ಕ್ರಮವಹಿಸುವಂತೆ ಸೂಚಿಸಿದ್ದರು. ಕಳೆದ ತಿಂಗಳ ಹಿಂದೆ ನಾಲೆಗಳಲ್ಲಿನ ಹೂಳು ತೆರವುಗೊಳಿಸಿ ನೀರೊದಗಿಸಲಾಗಿತ್ತು. ಈ ಹಿನ್ನೆಲೆ ಶಾಸಕ ಎಂ.ಆರ್.ಮಂಜುನಾಥ್ ಅವರು ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ತೆರಳಿ ಪರಿಶೀಲಿಸಿದರು.
ಈ ವೇಳೆ ಶಾಸಕರು ಕಾರ್ಯವೈಖರಿಯ ಬಗ್ಗೆ ಸ್ಥಳೀಯ ರೈತರಿಂದ ಮೆಚ್ಚುಗೆ ವ್ಯಕ್ತವಾಯಿತು.
ಈ ವೇಳೆ ಶಾಸಕ ಎಂ.ಆರ್.ಮಂಜುನಾಥ್ ಮಾತನಾಡಿ, ಹನೂರು ಭಾಗದಲ್ಲಿ ರೈತರು ಕೃಷಿಯನ್ನೇ ಹೆಚ್ಚು ಅವಲಂಬಿಸಿ ಜೀವನ ನಡೆಸುತ್ತಿದ್ದಾರೆ. ಹಾಗಾಗಿ ಸಮರ್ಪಕ ನೀರಾವರಿ ಸೌಕರ್ಯ ಒದಗಿಸುವುದು ನಮ್ಮ ಕರ್ತವ್ಯ. ಹಾಗಾಗಿ ಹುಬ್ಬೆಹುಣಸೆ ಡ್ಯಾಂನ ನಾಲೆಗಳಲ್ಲಿ ಸಂಗ್ರಹವಾಗಿದ್ದ ಹೂಳು ತೆರವುಗೊಳಿಸಿ ನೀರಾವರಿ ಸೌಕರ್ಯ ಒದಗಿಸಲಾಗಿದೆ. ರೈತರು ಇದರ ಪ್ರಯೋಜನ ಪಡೆದುಕೊಳ್ಳುತ್ತಿರುವುದು ನಿಜಕ್ಕೂ ಕೈಗೊಂಡ ಕಾರ್ಯ ಸಾರ್ಥಕತೆ ಎನಿಸಿದೆ. ಇನ್ನು ತಾಲೂಕಿನ ರೈತರಿಗೆ ಸಮರ್ಪಕ ನೀರಾವರಿ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಈಗಾಗಲೇ ಯೋಜನೆಯೊಂದನ್ನು ರೂಪಿಸಲಾಗಿದ್ದು, ಕಾರ್ಯಗತಗೊಳಿಸಲು ಶ್ರಮಿಸಲಾಗುತ್ತಿದೆ ಎಂದು ತಿಳಿಸಿದರು.
ನಾಲೆಯಲ್ಲಿ ಗಿಡಗಂಟಿಗಳನ್ನು ತೆರವು ಮಾಡುವುದು, ಒತ್ತುವರಿ ಬಗ್ಗೆ ಅಗತ್ಯ ಕ್ರಮವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಬಳಿಕ ಒಂಟಿ ಮಾಲಾಪುರ ಕೆರೆಗೆ ಭೇಟಿ ನೀಡಿ ಗ್ರಾಮಸ್ಥರಿಂದ ಮಾಹಿತಿ ಪಡೆದು ಪರಿಶೀಲಿಸಿದರು.
ಚಾಮುಲ್ ನಿರ್ದೇಶಕ ಉದ್ದನೂರು ಪ್ರಸಾದ್, ಗ್ರಾಪಂ ಸದಸ್ಯ ಚಿನ್ನವೆಂಕಟ, ಮುಖಂಡರಾದ ಮಂಜೇಶ್, ಗಿರೀಶ್, ಪ್ರಸಾದ್, ಅನಿಲ್, ವೆಂಕಟೇಶ್, ಸಿದ್ದರಾಜು ಇದ್ದರು.