ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ರಚನೆಗೆ ಆಗ್ರಹ

RV Deshpande
Published on

ಹಳಿಯಾಳ: ಹುಬ್ಬಳ್ಳಿ-ಅಂಕೋಲಾ ಹೊಸ ಬ್ರಾಡ್​ಗೇಜ್ ರೈಲು ಮಾರ್ಗ ನಿರ್ವಣಕ್ಕೆ ಅನುಮತಿ ನೀಡಬೇಕೆಂದು ಶಾಸಕ ಆರ್.ವಿ. ದೇಶಪಾಂಡೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಈ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಪರಿಸರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಅವರಿಗೆ ಪತ್ರ ಬರೆದಿದ್ದಾರೆ. ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗಕ್ಕೆ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಅಡಿಗಲ್ಲು ಹಾಕಿದ್ದರು. ಹುಬ್ಬಳ್ಳಿಯಿಂದ ಕಲಘಟಗಿವರೆಗೆ ಟ್ರ್ಯಾಕ್​ನ ಒಂದು ಭಾಗ ಪೂರ್ಣಗೊಂಡಿದೆ. ಮುಂದಿನ ಭಾಗದ ಕಾಮಗಾರಿಯು ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಬರುವುದರಿಂದ ಕಾರವಾರ, ಯಲ್ಲಾಪುರ ಮತ್ತು ಧಾರವಾಡ ವಿಭಾಗದ ಸುಮಾರು 595.64 ಹೆಕ್ಟರ್ ನಷ್ಟು ಅರಣ್ಯ ಭೂಮಿ ಉಪಯೋಗಿಸಬೇಕಾಗುತ್ತದೆ. ಹೀಗಾಗಿ ಇದಕ್ಕೆ ಕೇಂದ್ರ ಸರ್ಕಾರದ ಅನುಮತಿ ಬೇಕಾಗಿದೆ. ಈಗಾಗಲೇ ರಾಜ್ಯ ವನ್ಯಜೀವಿ ಮಂಡಳಿಯಲ್ಲಿ ರೈಲು ಮಾರ್ಗ ನಿರ್ವಣಕ್ಕಾಗಿ ಅರಣ್ಯ ಪ್ರದೇಶದ ಬಳಕೆಗೆ ಅನುಮತಿ ನೀಡಲಾಗಿದ್ದು, ಈ ಪ್ರಸ್ತಾವನೆಯನ್ನು ಕೇಂದ್ರ ವನ್ಯಜೀವಿ ಮಂಡಳಿಗೆ ಅನುಮತಿಗಾಗಿ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ. ಈ ಮನವಿ ಪತ್ರವನ್ನು ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಸುರೇಶ ಅಂಗಡಿ, ಸದಾನಂದಗೌಡ ಮತ್ತು ಪ್ರಲ್ಹಾದ ಜೋಶಿ ಅವರಿಗೂ ಕಳಿಸಿರುವ ಶಾಸಕ ದೇಶಪಾಂಡೆ ಈ ರೈಲ್ವೆ ಯೋಜನೆಗೆ ಅನುಮತಿ ನೀಡಲು ಒತ್ತಾಯಿಸಬೇಕೆಂದು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net