

ಗೋಣಿಕೊಪ್ಪಲು: ಆಪರೇಷನ್ ವಿಜಯ್ ಯಶಸ್ಸಿನ ಸ್ಮರಣಾರ್ಥ ಕಾವೇರಿ ಕಾಲೇಜು ಎನ್‌ಸಿಸಿ ಘಟಕದ ವತಿಯಿಂದ ಕಾಲೇಜು ಆವರಣದಲ್ಲಿರುವ ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಜನರಲ್ ತಿಮ್ಮಯ್ಯ ಅವರ ಜೋಡಿ ಪ್ರತಿಮೆಗಳಿಗೆ ಪುಷ್ಪ ನಮನ, ಕಾರ್ಗಿಲ್ ಯುದ್ಧದಲ್ಲಿ ಮಡಿದ ವೀರ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಕಾರ್ಗಿಲ್ ವಿಜಯ ದಿವಸ ಆಚರಿಸಲಾಯಿತು.
ಕಾವೇರಿ ಪದವಿ ಕಾಲೇಜು ಪ್ರಾಂಶುಪಾಲ ಡಾ.ಎಂ. ಬಿ.ಕಾವೇರಿಯಪ್ಪ ಮಾತನಾಡಿ, ಇಂದು ದೇಶದ ಸ್ವಾಭಿಮಾನದ ರಕ್ಷಣೆಗೆ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟ ಭಾರತಾಂಬೆಯ ಧೈರ್ಯಶಾಲಿ ಪುತ್ರರ ಅಪ್ರತಿಮ ಶೌರ್ಯವನ್ನು ನೆನೆಯುವ ದಿನವಾಗಿದೆ. ಜನ್ಮಭೂಮಿಗಾಗಿ ಜೀವ ತ್ಯಾಗ ಮಾಡಿದ ನಮ್ಮ ಹೆಮ್ಮೆಯ ಯೋಧರ ಸಾಹಸ ಮತ್ತು ದೇಶಪ್ರೇಮ ಇಂದಿನ ಯುವ ಜನತೆಗೆ ಸ್ಫೂರ್ತಿ ನೀಡುತ್ತದೆ ಎಂದರು.
ಭಾರತದ ಗಡಿಯಲ್ಲಿ ಜೀವ ಮತ್ತು ಜೀವನವನ್ನು ಪಣಕ್ಕಿಟ್ಟು ಹಗಲಿರುಳೆನ್ನದೆ ಶ್ರಮಿಸುತ್ತಿರುವ ನಮ್ಮ ದೇಶದ ಯೋಧರಿಂದಾಗಿ ನಾವು ಇಂದು ಸುರಕ್ಷಿತರಾಗಿದ್ದೇವೆ. ದೇಶ ರಕ್ಷಣೆಗಾಗಿ ಹುತಾತ್ಮರಾದ ಪ್ರತಿಯೊಬ್ಬ ಯೋಧರಿಗೂ ನಮಿಸುತ್ತಾ, ಇಂದು ದೇಶದ ಗಡಿಯಲ್ಲಿ ಹೋರಾಟ ನಡೆಸುತ್ತಿರುವ ಯೋಧರಿಗೆ ನಾವು ಚಿರಋಣಿಯಾಗಿರಬೇಕು. ಇಂತಹ ವೀರ ಯೋಧರನ್ನು ಸ್ಫೂರ್ತಿಯಾಗಿಸಿಕೊಂಡು ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ಸೈನ್ಯಕ್ಕೆ ಸೇರುವ ಮೂಲಕ ದೇಶ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು.
ಕಾವೇರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಎಸ್.ಎಸ್.ಮಾದಯ್ಯ ಮಾತನಾಡಿ, ಕಾರ್ಗಿಲ್ ಕದನದ ಗೆಲುವು ವಿಶ್ವಕ್ಕೆ ಭಾರತದ ತಾಕತ್ತನ್ನು ಪರಿಚಯಿಸುವುದರ ಜತೆಗೆ, ಯುವಕರಲ್ಲಿ ದೇಶಪ್ರೇಮದ ಕಿಚ್ಚನ್ನು ಹೊತ್ತಿಸಿತು. ಯಾವ ರೀತಿಯಲ್ಲಿ ದೇಶದ ಹೊರಗಿನ ಶತ್ರುಗಳನ್ನು ನಮ್ಮ ಸೈನಿಕರು ಮಟ್ಟ ಹಾಕುತ್ತಿದ್ದಾರೋ ಅದೇ ರೀತಿ, ಇಂದಿನ ಯುವಕರ ಬದುಕನ್ನು ಹಾಳು ಮಾಡುತ್ತಿರುವ ಮಾದಕವಸ್ತು ಎಂಬ ಶತ್ರುವನ್ನು ಬಡಿದೋಡಿಸಿ, ಆರೋಗ್ಯ ಕಾಪಾಡಿಕೊಂಡು ಉತ್ತಮ ಸಮಾಜ ನಿರ್ಮಾಣದಲ್ಲಿ ಯುವ ಜನತೆ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು.
ಎನ್‌ಸಿಸಿ ಅಧಿಕಾರಿಗಳಾದ ಡಾ.ಲೆಫ್ಟಿನೆಂಟ್ ಎಂ.ಆರ್.ಅಕ್ರಂ, ಲೆಫ್ಟಿನೆಂಟ್ ಐ.ಡಿ.ಲೇಪಾಕ್ಷಿ, ಉಪನ್ಯಾಸಕಿ ಎಸ್.ಎಂ.ರಜನಿ, ಕಚೇರಿ ಅಧೀಕ್ಷಕಿ ಟಿ.ಕೆ.ಲತಾ, ಆಡಳಿತಾತ್ಮಕ ಸಿಬ್ಬಂದಿ ಕಾವೇರಿ ಅಣ್ಣಯ್ಯ, ರೇಣು, ರೂಪಾ, ಅನುರಾಧಾ, ಸರಿತಾ, ರೀಟಾ, ರಾಧಾ, ಸರಸ್ವತಿ, ಚಿತ್ರಾ ಹಾಗೂ ಎನ್‌ಸಿಸಿ ಕೆಡೆಟ್‌ಗಳು ಹಾಜರಿದ್ದರು.