

ಗೋಣಿಕೊಪ್ಪಲು: ಹಿರಿಯರನ್ನು ಗೌರವಿಸುವುದು, ಅವರಿಗೆ ಬೇಕಾದ ಸೌಕರ್ಯಗಳನ್ನು ಕಲ್ಪಿಸುವುದು ನಮ್ಮೆಲ್ಲರ ಪ್ರಮುಖ ಆದ್ಯತೆಯಾಗಿರಬೇಕು ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ಶಾಸಕ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಸಲಹೆ ನೀಡಿದರು.
ಗೋಣಿಕೊಪ್ಪಲು ಪಂಚಾಯಿತಿ ಹಳೇ ಕಟ್ಟಡದ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಹಿರಿಯ ನಾಗರಿಕರಿಗೆ ಸಾಧನ ಸಲಕರಣೆ ವಿತರಣೆ ಕಾರ್ಯಕ್ರಮದಲ್ಲಿ ಸಾಧನ ಸಲಕರಣೆಗಳನ್ನು ವಿತರಿಸಿ ಮಾತನಾಡಿದರು.
ಹಿರಿಯರು ಕಟ್ಟಿದ ನಾಡಿನಲ್ಲಿ ನಾವೆಲ್ಲ ಇಂದು ಜೀವಿಸುತ್ತಿದ್ದು, ಅದನ್ನು ಉಳಿಸಿ ಬೆಳೆಸುವಂತಹ ಜವಾಬ್ದಾರಿ ನಮ್ಮೆಲ್ಲರ ಮೇಲೆ ಇದೆ ಎಂಬುದನ್ನು ಪ್ರತಿಯೊಬ್ಬರು ಅರಿತುಕೊಂಡಲ್ಲಿ ನಾಡಿನ ಎಲ್ಲ ಹಿರಿಯ ಜೀವಿಗಳಿಗೆ ನಾವು ನ್ಯಾಯ ಒದಗಿಸಿದಂತಾಗುತ್ತದೆ ಎಂದರು.
ಸರ್ಕಾರ ಹಿರಿಯ ನಾಗರಿಕರ ಅನುಕೂಲಕೆಂದು ಹಲವಾರು ಸವಲತ್ತುಗಳನ್ನು ನೀಡುತ್ತಿದ್ದು, ಅದರ ಸದುಪಯೋಗ ಎಲ್ಲ ಹಿರಿಯರಿಗೆ ತಲುಪುವಂತಾಗಲು ನಾವೆಲ್ಲರೂ ಶ್ರಮ ವಹಿಸಬೇಕೆಂದು ತಿಳಿಸಿದರು.
ಗೋಣಿಕೊಪ್ಪ ಪಂಚಾಯಿತಿ ಅಧ್ಯಕ್ಷ ಕುಲಚಂಡ ಪ್ರಮೋದ್ ಗಣಪತಿ, ಉಪಾಧ್ಯಕ್ಷೆ ಮಂಜುಳಾ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಿದೇರಿರ ನವೀನ್, ಇಲಾಖೆಯ ಅಧಿಕಾರಿಗಳು ಹಾಗೂ ಪ್ರಮುಖರು ಉಪಸ್ಥಿತರಿದ್ದರು.