

ಕಲಬುರಗಿ: ಜನ ಸಂಘದಿಂದ ಬೆಳೆದು ಬಂದ ಹಿರಿಯ ಕಾರ್ಯಕರ್ತರು ಭಾರತೀಯ ಜನತಾ ಪಕ್ಷಕ್ಕೆ ತಮ್ಮ ಆದರ್ಶಗಳ ಮೂಲಕ ಭದ್ರ ನೆಲೆಗಟ್ಟನ್ನು ನೀಡಿರುವುದರಿಂದ ಪಕ್ಷ ಇಂದು ಇಷ್ಟೊಂದು ಗಟ್ಟಿಗೊಂಡಿದೆ ಎಂದು ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲï.ಸಂತೋಷ್ ಅಭಿಪ್ರಾಯಪಟ್ಟರು.
ನಗರದ ಬಿಜೆಪಿ ಹಿರಿಯ ಕಾರ್ಯಕರ್ತ, ಸಾಹಿತಿ ೯೪ರ ಹರೆಯದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಹಾದೇವಪ್ಪ ಅವರನ್ನು ಅವರ ಸ್ವಗೃಹದಲ್ಲಿ ಶನಿವಾರ ಭೇಟಿ ಮಾಡಿ, ಸನ್ಮಾನಗೈದು ಮಾತನಾಡಿ, ಹಿರಿಯರ ಸಮರ್ಪಣಾ ಮನೋಭಾವದಿಂದ ಮಾದರಿಯಾಗಿ ಪಕ್ಷ ಬೆಳೆಯಲು ಭದ್ರ ತಳಪಾಯ ಒದಗಿಸಿಕೊಟ್ಟ ಹಿರಿಯರು ಅಭಿನಂದನೆಗೆ ಅರ್ಹರು. ಅವರು ಪರೀಕ್ಷೆ ಸದಾ ಮಾರ್ಗದರ್ಶನ ನೀಡಿ ಆಶೀರ್ವದಿಸುತ್ತಿದ್ದಾರೆ. ಈಗಿನ ನಾಯಕರು ಅವರಿಂದ ಪ್ರೇರಣೆ ಪಡೆದು ಪಕ್ಷಕ್ಕೆ ಶಕ್ತಿ ತುಂಬಬೇಕು. ಮಹದೇವಪ್ಪ ಕಡೇಚೂರ್ ಅವರದು ಅವಿಭಕ್ತ ಕುಟುಂಬವಾಗಿದ್ದು ೨೫ ಜನರು ಒಂದೇ ಮನೆಯಲ್ಲಿ ಆದರ್ಶದ ಜೀವನ ಮಾಡುತ್ತಿರುವುದು ಭಾರತೀಯ ಕುಟುಂಬ ಪದ್ಧತಿಯ ಆದರ್ಶ ಎಂದು ಹೇಳಿದರು.
ಮಹಾದೇವಪ್ಪ ಕಡೇಚೂರ್ ಅಭಿನಂದನೆಗೆ ಪ್ರತಿಕ್ರಿಯೆ ನೀಡಿ, ರಾಷ್ಟ್ರಮಟ್ಟದ ನಾಯಕರು ಹಿರಿಯ ಕಾರ್ಯಕರ್ತರನ್ನು ಹುಡುಕಿಕೊಂಡು ಮನೆಗೆ ಬಂದು ಗೌರವಿಸಿರುವುದು ನಿಷ್ಠಾವಂತರಾಗಿ ದುಡಿದ ಪಕ್ಷದ ಕಾರ್ಯಕರ್ತನಿಗೆ ರಾಷ್ಟ್ರ ನಾಯಕರು ನೀಡುವ ಅತ್ಯಮೂಲ್ಯ ಗೌರವ. ತತ್ವನಿಷ್ಟರಾಗಿ, ಪ್ರಾಮಾಣಿಕರಾಗಿ ನಾಯಕರೆಲ್ಲರೂ ಬಿಜೆಪಿ ಪಕ್ಷದ ಮೂಲಕ ರಾಷ್ಟ್ರ ಕಟ್ಟುವ ಕೆಲಸ ಮಾಡುವಂತಾಗಲಿ ಎಂದು ಆಶೀರ್ವದಿಸಿದರು.
ಬಿಜೆಪಿಯ ಹಿರಿಯ ಮುಖಂಡ ಶರಣಪ್ಪ ತಳವಾರ, ಆರ್‌ಎಸ್‌ಎಸ್ ವಿಭಾಗಿಯ ಸಂಘಟನಾ ಕಾರ್ಯದರ್ಶಿ ವಿಜಯ ಮಹಾಂತೇಶ, ಸಂಜೀವ ಭೋಸಗೀಕರ್, ಭರತ್ ಖಮಿತಕರ್, ಮಹೇಶ ಕಡೇಚೂರ್, ಡಾ.ಸದಾನಂದ ಪೆರ್ಲ, ಪ್ರಮೀಳಾ ಎಂ ಕೆ.,ದಿನೇಶ ಕಡೇಚೂರ್, ಅನೀಶ ಕಡೇಚೂರ್ ಇತರರಿದ್ದರು.