

ಬಾಗಲಕೋಟೆ: ಹಿರಿಯ ನಾಗರಿಕರಿಗಾಗಿ ಇಂಥ ಒಂದು ಕ್ಲಿನಿಕ್ ಆರಂಭಿಸುವುದು ಬಿವಿವಿ ಸಂಘದ ಆಶಯವಾಗಿತ್ತು, ಇಂದು ಸಾಕಾರಗೊಂಡಿದೆ. ಹಿರಿಯರ ಆರೋಗ್ಯ ಕಾಳಜಿ ವಹಿಸುವುದು ಎಲ್ಲರ ಕರ್ತವ್ಯ ಎಂದು ಎಸ್.ಎನ್. ಮೆಡಿಕಲ್ ಕಾಲೇಜ್ ಪ್ರಾಚಾರ್ಯೆ ಡಾ.ಭುವನೇಶ್ವರಿ ಯಳಮಲಿ ಹೇಳಿದರು.
ನಗರದ ಬಿವಿವಿ ಸಂಘದ ಎಸ್.ನಿಜಲಿಂಗಪ್ಪ ಮೆಡಿಕಲ್ ಕಾಲೇಜಿನ ಹಾನಗಲ್ಲ ಶ್ರೀ ಕುಮಾರೇಶ್ವರ ಆಸ್ಪತ್ರೆಯಲ್ಲಿ ಮಂಗಳವಾರ ಹಿರಿಯ ನಾಗರಿಕರ ಕ್ಲಿನಿಕ್ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ವೃದ್ಧರು ಇಂದಿನ ಯುವ ಪೀಳಿಗೆಯೊಂದಿಗೆ ತಮ್ಮ ಜೀವನಶೈಲಿ ಬದಲಿಸಿಕೊಂಡು ಹೋಗುವುದನ್ನು ರೂಢಿಸಿಕೊಳ್ಳಬೇಕು. ನಿವೃತ್ತಿ ಪೂರ್ವದಲ್ಲಿನ ದುಡಿಮೆಯ ಅಲ್ಪ ಭಾಗವನ್ನು ವೃದ್ಧರು ತಮ್ಮ ಜೊತೆಗಿಟ್ಟುಕೊಂಡರೆ ವೃದ್ಧಾಪ್ಯ ಜೀವನವನ್ನು ಸಂತೋಷಮಯವಾಗಿ ಕಳೆಯಬಹುದು ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಹಿರಿಯ ನಾಗರಿಕರಾದ ಡಾ.ಎ.ಬಿ.ಚೌಧರಿ, ಡಾ.ಶಿವಾಜಿರಾವ್ ಬ್ರಿಡ್, ಜಯಣ್ಣ ಮತ್ತು ತಿಪ್ಪವ್ವ ಅವರುಗಳನ್ನು ಸನ್ಮಾನಿಸಲಾಯಿತು. ಕುಮಾರೇಶ್ವರ ಆಸ್ಪತ್ರೆಯ ಅಧೀಕ್ಷಕ ಡಾ.ಶ್ರೀರಾಮ ಕೋರಾ, ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ.ಗೋಪಾಲ ಬಜಾಜ, ಡಾ.ನವೀನ ವೀ ಚರಂತಿಮಠ, ಡಾ. ಅಶೋಕ ಡೋರ್ಲೆ, ಡಾ.ನಾರಾಯಣ ಮುತಾಲಿಕ ಇದ್ದರು.