ಹಿರಿಯ ಜೀವಿಗಳನ್ನು ಗೌರವದಿಂದ ಕಾಣಬೇಕು

bkt-26-2
Published on

ಬಾಗಲಕೋಟೆ: ನವನಗರದ ಡಾ.ಬಿ.ಆರ್.ಅಂಬೇಡ್ಕರ ಭವನದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಕ್ರೀಡೆ ಹಾಗೂ ಸಾಂಸ್ಕøತಿಕ ಸ್ಪರ್ಧೆಗಳಿಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹೇಮಾ ಪಸ್ತಾಪೂರ ಸೋಮವಾರ ಚಾಲನೆ ನೀಡಿದರು.


ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ವಿಕಲಚೇತನರ ಕಲ್ಯಾಣ ಇಲಾಖೆ ಹಾಗೂ ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸ್ವಯಂ ಸಂಸ್ಥೆಗಳ ಸಹಯೋಗದಲ್ಲಿ ಜರುಗಿದ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಹಿರಿಯ ಜೀವಿಗಳನ್ನು ಗೌರವದಿಂದ ಕಾಣಬೇಕು. ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಕಾನೂನು ನೆರವು ಬೇಕಾಗಿದ್ದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಹಾಯಕ ಪಡೆಯಬಹುದಾಗಿದೆ ಎಂದರು.


ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಎನ್.ವೈ.ಬಸರಿಗಿಡದ ಮಾತನಾಡಿ, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಲು ಹಿರಿಯ ನಾಗರಿಕರು ಇಷ್ಟೊಂದು ಉತ್ಸುಕತೆಯಿಂದ ಸೇರಿರುವುದು ಸಂತಸವಾಗಿದೆ. ಶಕ್ತಿ ಮೀರಿ ಆಟಗಳನ್ನು ಆಡಬಾರದು. ನಿಮಗೆ ಸಾಧ್ಯವಾಗುವ ಆಟಗಳನ್ನು ಮಾತ್ರ ಆಡುವಂತೆ ಸಲಹೆ ನೀಡಿದರು.


ಪ್ರಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಸವಿತಾ ಕಾಳೆ ಮಾತನಾಡಿ, ಹಿರಿಯ ಜೀವಿಗಳು ಉತ್ಸುಕತೆಯಿಂದ ಇರುವಂತೆ ಮಾಡುವ ಉದ್ದೇಶದಿಂದ ಸರ್ಕಾರ ವಿವಿಧ ಚಟುವಟಿಕೆಗಳನ್ನು ಏರ್ಪಡಿಸುತ್ತಿದೆ. ಹಿರಿಯ ನಾಗರಿಕರಿಗೆ ಇಲಾಖೆಯಿಂದ ಅನೇಕ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಉಚಿತ ಸಹಾಯವಾಣಿ, ಸಾಧನ ಸಲಕರಣೆಗಳ ವಿತರಣೆ, ಹಗಲು ಯೋಗಕ್ಷೇಮ, ಜಿಲ್ಲಾ ವರಿಷ್ಠಾಧಿರಿಗಳ ಕಚೇರಿಯಲ್ಲಿ ಸಹಾಯವಾಣಿ ಸ್ಥಾಪಿಸಲಾಗಿದೆ. ಜಿಲ್ಲೆಯಲ್ಲಿ ಈಗಾಗಲೇ 4 ವೃದ್ದಾಶ್ರಮಗಳು ನಡೆಯುತ್ತೀವೆ ಎಂದು ತಿಳಿಸಿದರು.


ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರಾದ ನಿಂಗಪ್ಪ ಗೊಳಸಂಗಿ ಸೇರಿದಂತೆ ಆಯಾ ತಾಲೂಕಿನ ಎಂ.ಆರ್.ಡಬ್ಲೂ, ವಿವಿಧ ಸ್ಪರ್ಧೆಗಳ ನಿರ್ಣಾಯಕರು, ಹಿರಿಯ ನಾಗರಿಕರು ಉಪಸ್ಥಿತರಿದ್ದರು. ಹಿರಿಯ ನಾಗರಿಕ ಬಸವರಾಜ ಬಳ್ಳೊಳ್ಳಿ ಪ್ರಾರ್ಥನಾ ಗೀತೆ ಹಾಡಿದರು. ನಂತರ ವಿವಿಧ ಸ್ಪರ್ಧೆಗಳು ಜರುಗಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net