

ಬಾಗಲಕೋಟೆ: ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕ್ಷೇತ್ರಕ್ಕೆ ಹಲವಾರು ನಕ್ಷತ್ರಗಳನ್ನು ನೀಡಿದ ಹೆಮ್ಮೆ ಬಾಗಲಕೋಟೆ ಜಿಲ್ಲೆಗೆ ಇದೆ ಎಂದು ಚರಂತಿಮಠದ ಪ್ರಭು ಸ್ವಾಮೀಜಿ ಹೇಳಿದರು.
ನಗರದ ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳ ಸಮಿತಿ ಹಾಗೂ ಸಂಗೀತ ವಿಭಾಗದ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಹಿಂದೂಸ್ತಾನಿ ಶಾಸ್ತೀಯ ಸಂಗೀತ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಡಾ.ಮಲ್ಲಿಕಾರ್ಜುನ ಮನ್ಸೂರ ಅವರು ಸಂಗೀತ ಕ್ಷೇತ್ರಕ್ಕೆ ಹೋಗಿದ್ದು ಬಾಗಲಕೋಟೆಯ ರಂಗಭೂಮಿಯಿಂದ, ಗಾನಯೋಗಿ ಪಂಚಾಕ್ಷರಿ ಗವಾಯಿಗಳಿಗೆ ಗವಾಯಿ ಎಂದು ಬಿರುದು ನೀಡಿದ್ದು ಇದೇ ಬಾಗಲಕೋಟೆ, ಅಮೀರಬಾಯಿ ಕರ್ನಾಟಕಿ ಹಾಗೂ ಘೋರಬಾಯಿ ಕರ್ನಾಟಕಿ, ಪ್ಯಾರಾಭಾಯಿ ಬೀಳಗಿ, ಸಗುಣಾಬಾಯಿ ಚಂದಾವರಕರ, ಬೇವೂರ ಬಾದಶಾ, ಉತ್ತರ ಕರ್ನಾಟಕಕ್ಕೆ ಸೀತಾರವಾದನ ಪರಿಚಯಿಸಿದವರಲ್ಲಿ ಮುರನಾಳ ಮಳೆರಾಜೇಂದ್ರಸ್ವಾಮಿ ಮಠ ಗಂಗಾಧರಸ್ವಾಮಿಗಳು ಸೇರಿದಂತೆ ಹಿಂದೂಸ್ತಾನಿ ಸಂಗೀತ ಕ್ಷೇತ್ರಕ್ಕೆ ನೂರಾರು ಕಲಾವಿದರನ್ನು ಕೊಡುಗೆಯಾಗಿ ನೀಡಿದೆ ಎಂದರು.
ಬಿವಿವಿ ಸಂಘದ ಮುಖ್ಯಸಲಹೆಗಾರತಿ ಡಾ.ಮೀನಾ ಚಂದಾವರಕರ ಮಾತನಾಡಿ, ಭಾರತದಲ್ಲಿನ ಸಂಗೀತ, ನೃತ್ಯ, ಸಾಹಿತ್ಯ, ಕಲೆ, ಸಮೃದ್ಧಿ ಮತ್ತೆಲ್ಲಿಯೂ ಸಿಗಲಾರದು. ಒಂದು ಕಲೆಗೆ ನೈಪುಣ್ಯತೆ ಬರಬೇಕಾದರೆ ಪ್ರಾಮಾಣಿಕತೆ ಇರಬೇಕು. ಒತ್ತಡಮಯ ಜೀವನದಲ್ಲಿ ಒತ್ತಡವನ್ನು ಕುಗ್ಗಿಸುವ ಸಾಮರ್ಥ್ಯ ಸಂಗೀತದಲ್ಲಿದೆ. ಯಾರು ಮಾಡದಿರುವ ಕಾರ್ಯವನ್ನು ನೀವು ಮಾಡಬೇಕು. ನಿಮ್ಮ ಹಿಂದೆ ಪ್ರಯತ್ನ, ಪರಿಶ್ರಮ ಇರುವುದರಿಂದ ಸ್ಪರ್ಧೆಗಳಲ್ಲಿ ಭಾಗವಹಿಸಲು ಸಾಧ್ಯ ಎಂದು ಹೇಳಿದರು.
ಪ್ರಾಚಾರ್ಯ ಎಸ್.ಆರ್. ಮುಗನೂರಮಠ ಮಾತನಾಡಿ, ಸಂಗೀತ ಎಲ್ಲರಿಗೂ ಒಲಿಯದು. ಸಂಗೀತ ಕಲಿಯಬೇಕು ಎನ್ನುವ ಹಸಿವಿರಬೇಕು. ಸಂಗೀತದ ಪರಿಕಲ್ಪನೆಗೆ ಹೊಸ ಅಧ್ಯಾಯ ಪ್ರಾರಂಭವಾಗಿದೆ. ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉತ್ಕೃತಷ್ಟ ಕಲಾವಿದರಾಗಿ ಹೊರಹೊಮ್ಮಬೇಕು. ಸ್ಪರ್ಧಾ ಮನೋಭಾವದಿಂದ ಭಾಗವಹಿಸಿ ಎಂದರು.
ಬೊಮ್ಮನಹಳ್ಳಿಯ ವೀರಕ್ತಮಠದ ಶಿವಯೋಗಿ ಸ್ವಾಮೀಜಿ, ವಿಭಾಗದ ಮುಖ್ಯಸ್ಥ ಡಾ.ಕೆ.ವಿ.ಮಠ, ಐಕ್ಯೂಎಸಿ ಘಟಕದ ಸಂಯೋಜಕ ಡಾ.ಎ.ಯು.ರಾಠೋಡ, ಶಿವಯೋಗಿ ಸ್ವಾಮೀಜಿ, ಪಂ.ಎಸ್.ಸಿ.ಬಳ್ಳೂರ, ಪಂ.ಎಸ್.ವಿ. ಮಠಪತಿ, ಪ್ರೊ.ವಿಶ್ವನಾಥ ಮಹಾಪುರುಷ ಸೇರಿದಂತೆ ಇತರರು ಉಪಸ್ಥಿತರಿದ್ದರು.