

ಚಿಕ್ಕೋಡಿ: ಜಾತಿ ಗಣತಿ ಹೆಸರಿನಲ್ಲಿ ಹಿಂದುಗಳನ್ನು ಕ್ರಿಶ್ಚಿಯನ್ ಮಾಡಲು ಹೊರಟಿರುವ ಕಾಂಗ್ರೆಸ್ ಸರ್ಕಾರದ ಧೋರಣೆ ಖಂಡನಾರ್ಹ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಜಾತಿ ಗಣತಿ ನಡೆಸುವ ಮೂಲಕ ಹಿಂದು ಧರ್ಮ ಒಡೆಯುವ ಕೆಲಸ ಮಾಡುತ್ತಿದೆ. ಕಾಂತರಾಜು ವರದಿ ವೈಜ್ಞಾನಿಕವಾಗಿಲ್ಲ ಎಂದು ತಡೆಹಿಡಿದು, ಮತ್ತೊಂದು ಆಯೋಗ ರಚಿಸಿ ಜಾತಿಗಣತಿ ಹೆಸರಿನಲ್ಲಿ ಬಣಜಿಗ, ಕುರುಬ ಸೇರಿದಂತೆ ಇತರ ಹಿಂದುಗಳ ಧರ್ಮ ಪರಿವರ್ತನೆಗೆ ಸರ್ಕಾರ ಯತ್ನಿಸುತ್ತಿದೆ.
ಈ ವಿಷಯವನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿದ್ದು, ಸರ್ಕಾರದ ವಿರುದ್ಧ ಹೋರಾಟಕ್ಕೆ ನಿರ್ಧರಿಸಿದೆ. ಹಿಂದು ಧರ್ಮದ ಏಕತೆ ಕಾಪಾಡುವ ನಿಟ್ಟಿನಲ್ಲಿ ಈ ಹೋರಾಟ ನಡೆಯಲಿದೆ. ಸರ್ಕಾರ ಕೂಡಲೇ ಹಿಂದು ಧರ್ಮಿಯರ ಕ್ಷಮೆ ಕೆಳಬೇಕು ಎಂದು ಆಗ್ರಹಿಸಿದರು.
ಈ ಕುರಿತು ಜಿಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮುಖಾಂತರ ರಾಜ್ಯಪಾಲರು ಹಾಗೂ ಹಿಂದುಳಿದ ವರ್ಗಗಳ ಆಯೋಗಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.
ಅಮೃತ ಕುಲಕರ್ಣಿ, ಮಹೇಶ ಭಾತೆ, ಶ್ರೀನಾಥ ಘಟ್ಟಿ, ಪವನ ಮಹಾಜನ, ಪ್ರಭು ಬೆಲ್ಲದ, ಎನ್.ಎಸ್.ವಂಟಮುತ್ತೆ, ಲಕ್ಷ್ಮಣ ಡಂಗೇರ, ಸಿದ್ದಾರ್ಥ ಗಾಯಗೋಳ ಇತರರಿದ್ದರು.