ಹಿಂದಿ ದಿವಸ ಆಚರಣೆ ಕೈ ಬಿಡಿ

bkt-14-5
ಬಾಗಲಕೋಟೆ ನಗರದ ಜಿಲ್ಲಾಡಳಿತ ಭವನ ಎದುರು ಪ್ರತಿಭಟನೆ ನಡೆಸಿದ ಜೆಡಿಎಸ್ ಕಾರ್ಯಕರ್ತರು ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಅವರಿಗೆ ಮನವಿ ಸಲ್ಲಿಸಿದರು.
Published on

ಬಾಗಲಕೋಟೆ: ಭಾರತದ ಭಾಷಾ ನೀತಿಯನ್ನು ಮರು ಪರಿಶೀಲಿಸಿ ಸೆ.14ರ ಹಿಂದಿ ದಿವಸ ಆಚರಣೆಯನ್ನು ಕೈ ಬಿಡಬೇಕು ಎಂದು ಆಗ್ರಹಿಸಿ ಜೆಡಿಎಸ್ ಬಾಗಲಕೋಟೆ ತಾಲೂಕಾ ಘಟಕದ ಕಾರ್ಯಕರ್ತರು ಜಿಲ್ಲಾಡಳಿತ ಭವನ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಡಳಿತ ಭವನಕ್ಕೆ ಆಗಮಿಸಿದ ಜೆಡಿಎಸ್ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ನಂತರ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಅವರ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಿದರು.
ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಸಲೀಂ ಮೋಮಿನ್ ಮಾತನಾಡಿ, ವಿವಿಧತೆಯಲ್ಲಿ ಏಕತೆ ಸಂಸ್ಕೃತಿ, ಭಾಷೆ, ಪರಂಪರೆ ಹೊಂದಿದೆ ನಮ್ಮ ದೇಶ. ಇಲ್ಲಿ ಯಾವುದೇ ಒಂದು ಭಾಷೆ ರಾಷ್ಟ್ರ ಭಾಷೆಯಾಗಿ ಘೋಷಣೆ ಮಾಡಿಲ್ಲ. ಸಂವಿಧಾನದ 8ನೇ ಪರಿಚ್ಛೇದದಲ್ಲಿರುವ ಎಲ್ಲಾ 22 ಭಾಷೆಗಳು ದೇಶದ ರಾಷ್ಟ್ರೀಯ ಭಾಷೆಗಳೇ ಆಗಿವೆ. ಈ ಭಾಷೆಗಳ ನಡುವೆ ತಾರತಮ್ಯ ಎಸಗಿದರೇ ಅದು ಸಂವಿಧಾನವೇ ಹೇಳಿರುವ ಸಮಾನತೆಯ ತತ್ವಗಳಿಗೆ ವಿರುದ್ಧವಾಗಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಅಧಿಕೃತ ಭಾಷಾ ಕಾಯ್ದೆಯ ಹೆಸರಿನಲ್ಲಿ ಹಿಂದಿಯೇತರ ಭಾರತೀಯರ ಮೇಲೆ ಹಿಂದಿ ಭಾಷೆಯನ್ನು ಬಲವಂತವಾಗಿ ಹೇರುವ ಕಾರ್ಯಕ್ರಮಗಳು ಸಂವಿಧಾನದ ಜಾರಿಯಾದಾಗಿನಿಂದಲೂ ನಡೆದುಕೊಂಡು ಬಂದಿವೆ ಎಂದು ದೂರಿದ ಅವರು, ಕೇಂದ್ರ ಸರ್ಕಾರ ಹಿಂದಿ ಪರವಾದ ನೀತಿಗಳಿಂದಾಗಿ ಹಿಂದಿ ಭಾಷಿಕರು ಇತರ ಭಾಷಿಕರಿಗಿಂತ ಶಿಕ್ಷಣ, ಉದ್ಯೋಗದಿಂದ ಹಿಡಿದು ಎಲ್ಲಾ ಕ್ಷೇತ್ರಗಳಲ್ಲಿ ಹೆಚ್ಚಿನ ಆದ್ಯತೆ ಅವಕಾಶಗಳನ್ನು ಪಡೆಯುತ್ತಿದ್ದಾರೆ. ಇನ್ಯಾವುದೇ ಭಾಷೆಗಳ ಜನರಿಗೆ ಬೇರೆ ರಾಜ್ಯಗಳಲ್ಲಿ ತಮ್ಮ ಭಾಷೆಗಳಲ್ಲಿ ಸೇವೆ ಲಭಿಸುವುದಿಲ್ಲ. ಇಂತಹ ತಾರತಮ್ಯ ಒಕ್ಕೂಟ ವ್ಯವಸ್ಥೆಯನ್ನು ಶಿಥಿಲಗೊಳಿಸುತ್ತವೆ ಎಂದು ಕಿಡಿಕಾರಿದರು.
ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರೇಣುಕಾ ಭಜಂತ್ರಿ ಮಾತನಾಡಿ, ಸಂವಿಧಾನದ ಪರಿಚ್ಛೇದದಲ್ಲಿರುವ ಎಲ್ಲಾ 22 ಭಾಷೆಗಳಿಗೂ ಸಮಾನ ಸ್ಥಾನಮಾನವಿರಬೇಕು. ದೇಶದ ಎಲ್ಲಾ ಭಾಷೆಗಳು ಜೀವಂತವಿರಬೇಕು. ಎಲ್ಲಾ ಭಾಷೆಗಳು ಬೆಳೆಯಬೇಕು ಎಂಬುದು ನಮ್ಮ ಸ್ಪಷ್ಟ ನಿಲುವು. ಹಿಂದಿಯೂ ಕೂಡ ಕನ್ನಡ, ತಮಿಳು, ತೆಲಗು ಮಳಿಯಾಳಂ, ಪಂಜಾಬಿ ಭಾಷೆಗಳ ಹಾಗೆ ಒಂದು ಭಾಷೆಯಾಗಿದೆ. ಭಾರತ ಬಹು-ಭಾಷೆ, ಸಂಸ್ಕೃತಿ, ಧರ್ಮಗಳ ನಾಡು, ಈ ಬಹುತ್ವ ಉಳಿದವರಷ್ಟೇ ಒಕ್ಕೂಟ ಉಳಿಯಲು ಸಾಧ್ಯ ಎಂದು ಹೇಳಿದರು.
ಜೆಡಿಎಸ್ ಪ್ರ.ಕಾರ್ಯದರ್ಶಿ ಎಂ.ಎಂ.ನಧಾಪ, ಎನ್.ಐ.ತಹಸೀಲ್ದಾರ, ಎಸ್.ಬಿ.ನಾಯಕ ಪ್ರತಿಭಟನೆಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net