ಹಾಸ್ಟೆಲ್‌ನ ನಾಲ್ವರು ವಿದ್ಯಾರ್ಥಿನಿಯರಿಗೆ ಹೊಟ್ಟೆನೋವು

1001429726
Published on

ಹೊಳೆನರಸೀಪುರ: ಹೊಟ್ಟೆನೋವಿನಿಂದ ಬಳಲುತ್ತಿದ್ದ ಹಾಸ್ಟೆಲ್ ವಿದ್ಯಾರ್ಥಿನಿಯರನ್ನು ತಹಸೀಲ್ದಾರ್ ವೈ.ಎಂ.ರೇಣುಕುಮಾರ್ ತಮ್ಮ ಇಲಾಖೆ ಜೀಪಿನಲ್ಲಿ ಕರೆದೊಯ್ದು ಚಕಿತ್ಸೆ ಕೊಡಿಸಿ ಮಾನವೀಯತೆ ಮೆರೆದಿದ್ದಾರೆ.

ಪಟ್ಟಣದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಟ್ಟಡದ ಮೇಲಂತಸ್ತಿನಲ್ಲಿ ನಡೆದಿರುವ ಬಿಸಿಎಂ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಯರು ಶುಕ್ರವಾರ ರಾತ್ರಿ ಹೊಟ್ಟೆನೋವಿನಿಂದ ಬಳಲಿದ್ದರು. ಅಳುವ ಸದ್ದು ಕೇಳಿಬರುವುದನ್ನು ಗಮನಿಸಿದ ಸಾರ್ವಜನಿಕರು ತಹಸೀಲ್ದಾರ್‌ಗೆ ಕರೆಮಾಡಿ ಮಾಹಿತಿ ತಿಳಿಸಿದ್ದಾರೆ. ತಕ್ಷಣವೇ ಹಾಸ್ಟೆಲ್‌ಗೆ ಆಗಮಿಸಿದ ಅವರು, ವಿದ್ಯಾರ್ಥಿನಿಯರನ್ನು ವಿಚಾರಿಸಿ ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದಾರೆ.

ಹಾಸ್ಟೆಲ್‌ನ ಒಟ್ಟು 31 ವಿದ್ಯಾರ್ಥಿನಿಯರ ಪೈಕಿ ಕೇವಲ 4 ಮಂದಿಗೆ ಮಾತ್ರವೇ ಹೊಟ್ಟೆನೋವು ಕಾಣಿಸಿಕೊಂಡಿದೆ. ಇದರಿಂದ ಆಹಾರ ವ್ಯತ್ಯಾಸವಾಗಿಲ್ಲ ಎಂದು ದೃಢಪಡಿಸಿದ ರಾತ್ರಿ ಪಾಳೆಯಲ್ಲಿ ಕರ್ತವ್ಯನಿರತ ವೈದ್ಯ ಸತೀಶ್ ವಿದ್ಯಾರ್ಥಿನಿಯರಿಗೆ ಅಸಿಡಿಟಿ ಕಾರಣ ಇರಬಹುದು ಎಂದು ಚಿಕಿತ್ಸೆ ನೀಡಿದರು. ರಾತ್ರಿ ಊಟದ ನಂತರ ವಾರ್ಡನ್ ಹಾಸ್ಟೆಲ್‌ನಲ್ಲಿ ಇರಲಿಲ್ಲ. ಅಲ್ಲದೇ ವಿದ್ಯಾರ್ಥಿನಿಲಯದ ಮೇಲ್ವಿಚಾರಕಿ ಮೂರು ಹಾಸ್ಟೆಲ್‌ಗಳ ಉಸ್ತುವಾರಿ ವಹಿಸಿದ್ದಾರೆ. ಇಲಾಖೆಯಲ್ಲಿ ಮೇಲ್ವಿಚಾರಕಿಯರ ಹುದ್ದೆಗಳ ಖಾಲಿ ಇವೆ ಎಂದು ಬಿಸಿಎಂ ವಿಸ್ತರಣಾಧಿಕಾರಿ ಹರೀಶ್ ತಿಳಿಸಿದ್ದಾರೆ. ಪ್ರಸ್ತುತ ವಿದ್ಯಾರ್ಥಿನಿಯರು ಗುಣಮುಖರಾಗಿದ್ದಾರೆ.

ಶನಿವಾರ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದ ಬಿಸಿಎಂ ಇಲಾಖೆಯ ಜಿಲ್ಲಾ ಸಹಾಯಕ ನಿರ್ದೇಶಕ ಕುಮಾರ್ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿ, ಆನಾರೋಗ್ಯಕ್ಕೀಡಾಗಿದ್ದ ನಾಲ್ವರ ಪೈಕಿ ಒಂದಿಬ್ಬರಿಗೆ ನಿಸರ್ಗದತ್ತವಾಗಿ ಹೊಟ್ಟೆನೋವು ಕಾಣಿಸಿಕೊಂಡಿದೆ. ಉಳಿದ ಇಬ್ಬರಿಗೆ ಚಪಾತಿ ಸರಿಯಾಗಿ ಬೇಯಿಸದಿದ್ದನ್ನು ನೀಡಿದ್ದರಿಂದ ಸರಾಗವಾಗಿ ಜೀರ್ಣವಾಗದೆ ಹೊಟ್ಟೆನೋವು ಬಂದಿರಬಹುದು ಎಂದು ವೈದ್ಯರಿಂದ ಮಾಹಿತಿ ಪಡೆದಿದ್ದೇನೆ. ಅಗತ್ಯ ಎನಿಸಿದರೆ ಸೂಕ್ತ ತನಿಖೆ ನಡೆಸಿ ಮೇಲ್ವಿಚಾರಕಿ ನಿರ್ಲಕ್ಷದ ವಿರುದ್ಧ ಕ್ರಮ ಕೈಗೊಳ್ಳತ್ತೇವೆ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net