ಹಾಸನದಲ್ಲಿ ಹೋರಾಟ ೩೦ರಂದು

arjun bhadre
Published on

ಕಲಬುರಗಿ: ಸಂಸದ ಪ್ರಜ್ವಲ್​ ರೇವಣ್ಣ ಬಂಧನಕ್ಕೆ ಆಗ್ರಹಿಸಿ, ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ (ಕ್ರಾಂತಿಕಾರಿ) ರಾಜ್ಯ ಸಮಿತಿಯಿಂದ ಮೇ ೩೦ರಂದು ಹೋರಾಟದ ನಡಿಗೆ ಹಾಸನದ ಕಡೆಗೆ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ರಾಜ್ಯ ಸಂಚಾಲಕ ಅರ್ಜುನ ಭದ್ರೆ ಹೇಳಿದರು.

ಹಾಸನದಲ್ಲಿ ನಡೆಯುವ ಹೋರಾಟದ ನಡಿಗೆ-ಹಾಸನ ಕಡೆಗೆ ಬೃಹತ್ ಪ್ರತಿಭಟನೆ ಹಾಗೂ ಬಹಿರಂಗ ಸಭೆಯಲ್ಲಿ ಜಿಲ್ಲೆಯಿಂದ ೨೦೦೦ಕ್ಕೂ ಅಧಿಕ ಜನ ಭಾಗವಹಿಸಲಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಹಾಸನ ಪ್ರಕರಣದಿಂದ ಇಡೀ ನಾಡು ತಲೆ ತಗ್ಗಿಸುವಂತಾಗಿದೆ. ಇದೊಂದು ನಾಚಿಕೆಗೇಡಿನ ವಿಚಾರ. ಮಹಿಳೆಯರು ಭಯದಿಂದ ಬದುಕುತ್ತಿದ್ದಾರೆ. ಹಾದಿ-ಬೀದಿಗಳಲ್ಲಿ ಹೆಣ್ಣು ಮಕ್ಕಳ ಮಾನ-ಪ್ರಾಣ ಹರಣವಾಗುತ್ತಿದೆ. ರಾಜ್ಯದಲ್ಲಿ ಯುವತಿಯರ ಕೊಲೆ ಆಗುತ್ತಿದ್ದರೂ ಸರ್ಕಾರ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಜ್ವಲ್ ಕುಟುಂಬದವರು ಸಾರ್ವಜನಿಕವಾಗಿ ಜನರ ಕ್ಷಮೆ ಕೇಳಬೇಕು. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸಂತ್ರಸ್ತರ ನೆರವಿಗೆ ನಿಲ್ಲಬೇಕು ಎಂದು ಹೇಳಿದರು. ಮಲ್ಲಿಕಾರ್ಜುನ ಕ್ರಾಂತಿ, ಸೂರ್ಯಕಾಂತ ಅಜಾದಪುರ, ಮಲ್ಲಿಕಾರ್ಜುನ ಖನ್ನಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net