

ಯಲ್ಲಾಪುರ: ಚಾಲಕನ ನಿಯಂತ್ರಣ ತಪ್ಪಿ ಪೊಲೀಸ್ ವ್ಯಾನ್ ಪಲ್ಟಿಯಾಗಿ 16 ಜನರು ಗಾಯಗೊಂಡ ಘಟನೆ ಯಲ್ಲಾಪುರ-ಮುಂಡಗೋಡ ರಸ್ತೆಯ ಕುಚಗಾಂವ ಕ್ರಾಸ್ನ ತಿರುವಿನಲ್ಲಿ ಶುಕ್ರವಾರ ಸಂಭವಿಸಿದೆ. ವ್ಯಾನ್ನಲ್ಲಿ ಹಾವೇರಿಯ ಪೊಲೀಸ್ ಇಲಾಖೆಯ ಡಿಪಿಒ ಸಿಬ್ಬಂದಿ ತಮ್ಮ ಕುಟುಂಬ ಸಮೇತರಾಗಿ ಯಲ್ಲಾಪುರದ ಚಂದಗುಳಿ ಘಂಟೆ ಗಣಪತಿ, ಸಾತೊಡ್ಡಿ ಜಲಪಾತಕ್ಕೆ ಪ್ರವಾಸಕ್ಕೆ ಬರುತ್ತಿದ್ದರು ಎನ್ನಲಾಗಿದೆ. ಕುಚಗಾಂವ ಕ್ರಾಸ್ ಬಳಿಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ವ್ಯಾನ್ ರಸ್ತೆ ಪಕ್ಕದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಬಸ್ನಲ್ಲಿದ್ದ ಮೂವರಿಗೆ ಹೆಚ್ಚಿನ ಗಾಯಗಳಾಗಿದ್ದು, ಉಳಿದ 13 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ವ್ಯಾನ್ನಲ್ಲಿ 20 ಕ್ಕೂ ಹೆಚ್ಚು ಜನರಿದ್ದರು. ವ್ಯಾನ್ ಡಿಕ್ಕಿ ಹೊಡೆದ ಪರಿಣಾಮ ಮೂರು ವಿದ್ಯುತ್ ಕಂಬಗಳು ಮುರಿದಿವೆ. ಗಾಯಾಳುಗಳನ್ನು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ.