

ಗೋಣಿಕೊಪ್ಪಲು: ಗೋಣಿಕೊಪ್ಪದ ಕ್ಯಾಲ್ಸ್ ವಿದ್ಯಾಸಂಸ್ಥೆಯ ಆವರಣದಲ್ಲಿ ರಾಷ್ಟ್ರ ಮಟ್ಟದ ಕೊಡಗು ಮಾನ್ಸೂನ್ ಹಾಫ್ ಮ್ಯಾರಥಾನ್ ಅತ್ಯಂತ ಯಶಸ್ವಿಯಾಗಿ ಭಾನುವಾರ ನಡೆಯಿತು.
ದೇಶ ಹಾಗೂ ವಿದೇಶದಿಂದ ಆಗಮಿಸಿದ್ದ ಮ್ಯಾರಥಾನ್ ಪಟುಗಳು ಮುಂಜಾನೆಯ ಚುಮು ಚುಮು ಚಳಿಯ ನಡುವೆ ಓಟದಲ್ಲಿ ಭಾಗವಹಿಸಿ ಗಮನ ಸೆಳೆದರು. ಮೂರು ವಿಭಾಗಗಳಲ್ಲಿ ನಡೆದ ಓಟದ ಸ್ಪರ್ಧೆಯು 21 ಕಿ.ಮಿ(ಹಾಫ್ ಮ್ಯಾರಥಾನ್), 10ಕಿ.ಮಿ ಹಾಗೂ 5 ಕಿ.ಮೀ.ಸ್ಪರ್ಧೆಗಳನ್ನು ಒಳಗೊಂಡಿತ್ತು. ಶಾಲಾ ಆವರಣದಿಂದ ಮ್ಯಾರಥಾನ್ ಪಟುಗಳು ಬೆಳಗ್ಗೆ 6 ಗಂಟೆಗೆ ಮೊದಲ ಸುತ್ತಿನಲ್ಲಿ ಓಟ ಆರಂಭಿಸಿದರು. ಎರಡನೇ ಸುತ್ತಿನ ಮ್ಯಾರಥಾನ್ 6.45ಕ್ಕೆ ಪ್ರಾರಂಭವಾದರೆ, ಮೂರನೇ ಸುತ್ತಿನ ಓಟವು 8.30 ಗಂಟೆಗೆ ಆರಂಭವಾಯಿತು. ಮ್ಯಾರಥಾನ್ ಪಟುಗಳು ಕೈಕೇರಿ, ಕಳತ್ಮಾಡು, ಪಾಲಿಬೆಟ್ಟ ಟಾಟಾ ಕಾಫಿ ತೋಟದ ಮೂಲಕ ಸಾಗಿ ನಂತರ ಕ್ಯಾಲ್ಸ್ ಮೈದಾನಕ್ಕೆ ಆಗಮಿಸಿದರು. ಐದು ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಮ್ಯಾರಥಾನ್ ಕ್ರೀಡಾಪಟುಗಳು ಆಗಮಿಸುವ ಮೂಲಕ ಹೊಸ ಇತಿಹಾಸ ನಿರ್ಮಾಣ ಮಾಡಿದರು.
ಶ್ರೀಲಂಕಾ ಹಾಗೂ ಇಥಿಯೋಪಿಯ ದೇಶಗಳ ಮ್ಯಾರಥಾನ್ ಪಟುಗಳು ಆಗಮಿಸಿ ಪುರುಷರ ಹಾಗೂ ಮಹಿಳಾ ವಿಭಾಗದ ಪ್ರಥಮ ಬಹುಮಾನವನ್ನು ಪಡೆಯುವ ಮೂಲಕ ಗಮನ ಸೆಳೆದರು.
ಸಣ್ಣ ಮಕ್ಕಳಿಂದ ಹಿಡಿದು 72 ವಯಸ್ಸಿನ ಕ್ರೀಡಾಪಟುಗಳು ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಕ್ಯಾಲ್ಸ್ ವಿದ್ಯಾಸಂಸ್ಥೆಯ ಟರ್ಫ್ ಮೈದಾನದಲ್ಲಿ ಮುಂಜಾನೆಯ 5 ಗಂಟೆಯ ವೇಳೆ ಸಹಸ್ರಾರು ಸಂಖ್ಯೆಯಲ್ಲಿ ಕ್ರೀಡಾಪಟುಗಳು ಜಮಾವಣೆಗೊಳ್ಳುವ ಮೂಲಕ ನಿಗದಿತ ಸಮಯದಲ್ಲಿ ಕ್ರೀಡೆಯಲ್ಲಿ ಭಾಗವಹಿಸಿ ಪರಸ್ಪರ ಸಂತಸ ಹಂಚಿಕೊಂಡರು.
ಕರುಂಬಯ್ಯಸ್ ಅಕಾಡೆಮಿ ಫಾರ್ ಲನಿರ್ಂಗ್ ಆ್ಯಂಡ್ ಸ್ಪೋರ್ಟ್ಸ್ (ಕ್ಯಾಲ್ಸ್), ಅಶ್ವಿನಿ ಸ್ಪೋರ್ಟ್ಸ್ ಫೌಂಡೇಷನ್, ಎನ್.ಇ.ಬಿ.ಫೆಡರಲ್ ಬ್ಯಾಂಕ್, ಲೋಪಮುದ್ರ ಆಸ್ಪತ್ರೆ ಹಾಗೂ ಟಾಟಾ ಕಾಫಿ ಸಹಯೋಗದೊಂದಿಗೆ 4ನೇ ಆವೃತ್ತಿಯ ರಾಷ್ಟ್ರೀಯ ಕೊಡಗು ಮಾನ್ಸೂನ್ ಹಾಫ್ ಮ್ಯಾರಥಾನ್ ಅಚ್ಚುಕಟ್ಟಾಗಿ ನೆರವೇರಿತು.
21ಕಿ.ಮೀ.ಹಾಫ್ ಮ್ಯಾರಥಾನ್‌ಗೆ ಫೆಡರಲ್ ಬ್ಯಾಂಕ್ ಕಾರ್ಯನಿರ್ವಾಹಕ ನಿರ್ದೇಶಕರಾದ ವೆಂಕಟ್‌ರಾಮನ್ ವೆಂಕಟೇಶ್ವರನ್ ಹಾಗೂ ಕರ್ನಾಟಕ ಸರ್ಕಾರದ ಸಾರಿಗೆ, ತೋಟಗಾರಿಕೆ ಹಾಗೂ ರೇಷ್ಮೆ ಕೃಷಿಯ ಕಾರ್ಯದರ್ಶಿ ರಾಜೇಂದರ್ ಕಠಾರಿಯ ಚಾಲನೆ ನೀಡಿದರು. 10 ಕಿ.ಮೀ.ಓಟದ ಸ್ಪರ್ಧೆಯನ್ನು ಕ್ಯಾಲ್ಸ್ ವಿದ್ಯಾಸಂಸ್ಥೆಯ ಹಳೆಯ ವಿದ್ಯಾರ್ಥಿ ಹಾಗೂ ಭಾರತ ಹಾಕಿ ತಂಡದ ಆಟಗಾರ ಚಂದೂರ ಪೂವಣ್ಣ, ಅರ್ಜುನ ಪ್ರಶಸ್ತಿ ವಿಜೇತೆ ಹಾಗೂ ಅಶ್ವಿನಿ ಸ್ಪೋರ್ಟ್ಸ್ ಫೌಂಡೇಷನ್ ಸಂಸ್ಥಾಪಕಿ ಅಶ್ವಿನಿ ನಾಚಪ್ಪ, ಕ್ಯಾಲ್ಸ್ ಶಾಲೆ ಸ್ಥಾಪಕ ಅಧ್ಯಕ್ಷ ದತ್ತ ಕರುಂಬಯ್ಯ, ಪ್ರಾಂಶುಪಾಲರಾದ ಗೌರಮ್ಮ ನಂಜಪ್ಪ, ಎನ್.ಇ.ಬಿ ಸ್ಪೋರ್ಟ್ಸ್ ನಿರ್ದೇಶಕಿ ರೀತ್ ದೇವಯ್ಯ ಹಾಗೂ ಎನ್.ಇ.ಬಿ.ಸ್ಪೋರ್ಟ್ಸ್ ವ್ಯವಸ್ಥಾಪಕ ನಿರ್ದೇಶಕ ನಾಗರಾಜ್ ಅಡಿಗ ಅವರು ಚಾಲನೆ ನೀಡಿದರು.
5 ಕಿ.ಮೀ.ಓಟಕ್ಕೆ ಟಾಟಾ ಕಾಫಿ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ಸಿ.ಎ.ಬೋಪಯ್ಯ ಚಾಲನೆ ನೀಡಿದರು.
ಬಹುಮಾನ ವಿಜೇತರು: ಹಾಫ್ ಮ್ಯಾರಥಾನ್ ಮಹಿಳೆಯರ ವಿಭಾಗದಲ್ಲಿ ಸೆನೈಟ್ ಕೆಫೆಲೆಗನ್ ಲೆಶಾರ್ಜ್, ಬಿಜಾಯ್ ಬರ್ಮನ್ ಹಾಗೂ ವಿಜಯಲಕ್ಷ್ಮೀ ಕರಲಿಂಗಣ್ಣವರ್ ಅವರು ಕ್ರಮವಾಗಿ ಪ್ರಥಮ 3 ಸ್ಥಾನಗಳನ್ನು ಅಲಂಕರಿಸಿದರು. ಹಾಫ್ ಮ್ಯಾರಥಾನ್ ಪುರುಷರ ವಿಭಾಗದಲ್ಲಿ ನಿಗುಸೆ ಕೆಬೆಡೆ ಗುರ್ಮೆಸ್ಸಾ, ಶಿವಾನಂದ ಲಕ್ಷ್ಮಣ ಚಿಗಾರಿ ಹಾಗೂ ರಂಗಣ್ಣ ನಾಯ್ಕರ್ ಪ್ರಥಮ, ದ್ವಿತೀಯ, ತೃತೀಯ ಪಡೆದು ವಿಜೇತರಾಗಿ ಹೊರಹೊಮ್ಮಿದರು. ಮಹಿಳೆಯರ 10 ಕಿ.ಮೀ. ಓಟದಲ್ಲಿ ನೂರ್‌ಜಹಾನ್ ಎ ಮುಜಾವರ್, ರೋಹಿಣಿ ಎ.ದುರಾದುಂಡಿ, ಚೋಂದಮ್ಮ ಕೆ.ಟಿ. ಅವರು ಕ್ರಮವಾಗಿ 3 ಸ್ಥಾನಗಳನ್ನು ಗಳಿಸಿದರು. ಪುರುಷರ 10 ಕಿ.ಮೀ.ವಿಭಾಗದಲ್ಲಿ ಮಣಿಕಂಠ, ದೇವ್ ನಾರಾಯಣ್ ಗುರುರಾಜ್, ಮಣಿಕಂಠ ಮಡಿವಾಳರ್ ಅವರು ವಿಜೇತರಾಗಿ ಹೊರಹೊಮ್ಮಿದರು. ಹಾಫ್ ಮ್ಯಾರಥಾನ್ ವಿಜೇತರಿಗೆ 25,000 ರೂ., 15,000 ರೂ.ಹಾಗೂ 12,500 ರೂ.ಬಹುಮಾನ ವಿತರಣೆ ಮಾಡಲಾಯಿತು.