

ಗುಂಡ್ಲುಪೇಟೆ: ತಾಲೂಕಿನ ಗೋಪಾಲಪುರ ಗ್ರಾಮದ ಜಮೀನಿನಲ್ಲಿ ಮತ್ತೆ ಹುಲಿ ಕಾಣಿಸಿಕೊಂಡು ಹಾಡಹಗಲೇ ಹಸು ಮೇಲೆ ದಾಳಿ ನಡೆಸಿರುವುದು ಗ್ರಾಮಸ್ಥರನ್ನು ಆತಂಕಕ್ಕೀಡು ಮಾಡಿದೆ.
ಕಳೆದ ತಿಂಗಳು ಎರಡು ಮರಿಗಳೊಂದಿಗೆ ಗ್ರಾಮದ ಜಿ.ಜಿ.ಮಲ್ಲಿಕಾರ್ಜುನಪ್ಪ ಅವರ ಜಮೀನಿನಲ್ಲಿ ಬೀಡುಬಿಟ್ಟಿದ್ದ ಹುಲಿ ಅರಣ್ಯ ಇಲಾಖೆ ಕೂಂಬಿಂಗ್ ನಡೆಸಿದ ನಂತರ ಪಕ್ಕದ ಬಸವರಾಜಪ್ಪ ಅವರ ಜಮೀನಿಗೆ ಸ್ಥಳಾಂತರಗೊಂಡಿತ್ತು. ಅಲ್ಲಿಯೂ ಪಟಾಕಿ ಸಿಡಿಸಿದ್ದರಿಂದ ಕಾಡಿಗೆ ಹೋಗಿದ್ದ ಹುಲಿ ಮತ್ತೆ ಗುರುವಾರ ಬಸವರಾಜಪ್ಪ ಅವರ ಜಮೀನಿನಲ್ಲಿ ಮೇಯುತ್ತಿದ್ದ ಹಸುವಿನ ಮೇಲೆ ಹಾಡಹಗಲಿನಲ್ಲಿಯೇ ದಾಳಿ ಮಾಡಿದೆ. ಆದರೆ ದಾಳಿಯಿಂದ ಹಸು ಪಾರಾಗಿ ಓಡಿ ಬಂದಿದ್ದರಿಂದ ಜನರನ್ನು ಕಂಡ ಹುಲಿ ಹಿಮ್ಮೆಟ್ಟಿದೆ. ಹಸುವಿನ ಮೈಮೇಲೆ ಆದ ಗಾಯದಿಂದ ರಕ್ತ ಸೋರುತ್ತಿದ್ದು ಚಿಕಿತ್ಸೆ ಕೊಡಿಸಲಾಗಿದೆ.
ಸ್ಥಳಕ್ಕೆ ಆಗಮಿಸಿದ ಅರಣ್ಯ ಸಿಬ್ಬಂದಿ ಹುಲಿಯ ಹೆಜ್ಜೆ ಗುರುತು ಪತ್ತೆಹಚ್ಚಿ ಸೆರೆಗೆ ಕಾರ್ಯಾಚರಣೆ ನಡೆಸುವ ಭರವಸೆ ನೀಡಿದ್ದಾರೆ.
ಹುಲಿ ಸೆರೆಗೆ ಗ್ರಾಮಸ್ಥರ ಒತ್ತಾಯ: ಅರಣ್ಯ ಇಲಾಖೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಹುಲಿ ಸೆರೆ ಕಾರ್ಯ ಕೈಗೊಳ್ಳಬೇಕು ಎಂದು ರೈತ ಜಿ.ಜಿ.ಮಲ್ಲಿಕಾರ್ಜುನ ಒತ್ತಾಯಿಸಿದ್ದಾರೆ.