

ವಿರಾಜಪೇಟೆ: ಹಿಂಡಿನಿಂದ ಬೇರ್ಪಟ್ಟ ಕಾಡಾನೆಯೊಂದು ಒಂದನೇ ರುದ್ರಗುಪ್ಪೆ ಗ್ರಾಮದಲ್ಲಿ ಗುರುವಾರ ಬೆಳಗ್ಗೆ ಸಂಚರಿಸಿ ಭಯದ ವಾತಾವರಣ ನಿರ್ಮಿಸಿದೆ.
ವಿರಾಜಪೇಟೆ ತಾಲೂಕಿನ ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಂದನೇ ರುದ್ರಗುಪ್ಪೆ ಗ್ರಾಮದ ಆಟ್ರಂಗಡ ಮನೆಗೆ ತೆರಳುವ ರಸ್ತೆಯಲ್ಲಿ ಬೆಳಗ್ಗೆ ಕಾಡಾನೆಯೊಂದು ರಾಜಾರೋಷವಾಗಿ ಸಂಚರಿಸಿದೆ.
ಗ್ರಾಮದ ವಿವಿಧ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳ ಹಿಂಡು, ಕಾಫಿ ಗಿಡಗಳು ಸೇರಿದಂತೆ ಇತರ ಫಲ ನೀಡುವ ಬಾಳೆ, ತೆಂಗಿನ ಗಿಡಗಳಿಗೆ ಹಾನಿಯುಂಟು ಮಾಡಿದೆ.
ಈ ಬಗ್ಗೆ ಮಾತನಾಡಿದ ಗ್ರಾಮಸ್ಥ ಅಟ್ರಂಗಡ ನಂದ, ಸನಿಹದ ಬಿ.ಶೆಟ್ಟಿಗೇರಿ ಪ್ರದೇಶದಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳು ರುದ್ರಗುಪ್ಪೆ ಗ್ರಾಮದ ತೋಟಗಳಿಗೆ ಲಗ್ಗೆ ಇಟ್ಟಿವೆ. ತೋಟಗಳಲ್ಲಿ ಅಪಾರ ಪ್ರಮಾಣದ ಬೆಳೆ ಹಾನಿ ಮಾಡಿದೆ. ಮೂರು ದಿನಗಳ ಹಿಂದೆ ಮೂರು ಕಾಡಾನೆಗಳ ಹಿಂಡು ನನ್ನ ತೋಟದಲ್ಲಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತೋಟಕ್ಕೆ ಗೊಬ್ಬರ ಹಾಕಲು ಸಾಧ್ಯವಾಗಲಿಲ್ಲ. ಗುರುವಾರ ಬೆಳಗ್ಗೆ 7ಗಂಟೆಯಲ್ಲಿ ಮನೆಯ ಮುಂಭಾಗದ ರಸ್ತೆಯಲ್ಲಿ ಒಂಟಿ ಸಲಗ ಸಂಚರಿಸುತ್ತಿರುವುದು ಕಂಡುಬಂದಿದೆ. ನಾಯಿಗಳ ಕೂಗಾಟಕ್ಕೆ ಬೆದರಿ ಕಾಡಾನೆಯು ಓಡಲಾರಂಭಿಸಿತು.
ಘಟನೆಯಿಂದಾಗಿ ಗ್ರಾಮದಲ್ಲಿ ಭಯದ ವಾತಾವರಣ ಕಂಡುಬಂದಿದೆ. ಇಲಾಖೆಯು ಕಾರ್ಯಾಚರಣೆ ನಡೆಸಿ ಅರಣ್ಯಕ್ಕೆ ಅಟ್ಟುವಂತೆ ಮನವಿ ಮಾಡಿದ್ದಾರೆ.