

ಅರಕಲಗೂಡು: ತಾಲೂಕಿನ ತರಿಗಳಲೆ ಗ್ರಾಮದಲ್ಲಿ ಭಾನುವಾರ ಹಸುವಿನ ಮೇಲೆ ಕಾಡಾನೆ ದಾಳಿ ನಡೆಸಿ ಗಾಯಗೊಳಿಸಿದೆ.
ಗ್ರಾಮದ ಪ್ರಾಣತೀಶ್ ಅವರು ತಮ್ಮ ಮನೆ ಬಳಿ ಬೆಳಗ್ಗೆ ನಾಲ್ಕು ಹಸುಗಳನ್ನು ಕಟ್ಟಿದ್ದರು. ಗುಂಪಿನಿಂದ ತಪ್ಪಿಸಿಕೊಂಡು ಬಂದ ಸಲಗ ಕೋರೆಯಿಂದ ಹಸುವಿಗೆ ತಿವಿದಿದೆ. ತಕ್ಷಣ ಗ್ರಾಮಸ್ಥರ ಕಿರುಚಾಟ ಕೇಳಿ ಆನೆ ಅಲ್ಲಿಂದ ಕಾಲ್ಕಿತ್ತಿದೆ. ಕೊಡಗಿನ ಗಡಿ ಭಾಗದ ಕಡೆಯಿಂದ ಐದು ಕಾಡಾನೆಗಳ ಗುಂಪಿನಿಂದ ತಪ್ಪಿಸಿಕೊಂಡ ಬಂದ ಸಲಗ ಹಸುವಿನ ದಾಳಿ ಮಾಡಿದೆ. ಗಾಯಗೊಂಡ ಹಸುವಿಗೆ ಚಿಕಿತ್ಸೆ ಕೊಡಿಸಲಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಆನೆಗಳನ್ನು ಕೊಡಗಿನತ್ತ ಕಾಡಿಗೆ ಅಟ್ಟಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿ ದಿಲೀಪ್ ತಿಳಿಸಿದರು.