ಹಳ್ಳಿಗಳಲ್ಲಿ ಕಾಡುತ್ತಿದೆ ಕರೊನಾ ಭೀತಿ

26KWR3
Published on

ವಿಜಯವಾಣಿ ವಿಶೇಷ ಕಾರವಾರ

ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಪವಡಿಸಿದ ಉತ್ತರ ಕನ್ನಡದ ಹಳ್ಳಿಗಳಿಗೆ ಕರೊನಾ ಭೀತಿ ಕಾಡಿದೆ.

ಜಿಲ್ಲೆಯ ಕರಾವಳಿ ಹಾಗೂ ಮಲೆನಾಡಿನ ಹಳ್ಳಿಗಳ ಸಾವಿರಾರು ಜನರು ವಿದೇಶದಲ್ಲಿದ್ದಾರೆ. ಇನ್ನೂ ಹಲವರು ಮುಂಬೈ, ಪುಣಾ, ಗೋವಾ, ಬೆಂಗಳೂರು ಹೀಗೆ ಮಹಾ ನಗರಗಳಲ್ಲಿದ್ದಾರೆ.

ಕರೊನಾ ಭೀತಿ ಮಹಾನಗರಗಳನ್ನು ಆವರಿಸಿ ಅಲ್ಲೆಲ್ಲ ಶಟ್​ಡೌನ್ ಆಗುತ್ತಿದ್ದಂತೆ ಮಹಾನಗರಗಳ ಜನ ಹಳ್ಳಿಗಳತ್ತ ಮುಖ ಮಾಡಿದ್ದಾರೆ. ‘ಅಪ್ಪ ಅಮ್ಮನಿಗೆ ಹುಷಾರಿಲ್ಲ ಎಂದರೂ ಮನೆಗೆ ಬಾರಲು ಒಪ್ಪದ ಜನರೆಲ್ಲ ಈಗ ಮನೆಯೆಡೆಗೆ ತಮ್ಮ ಸ್ವಂತ ವಾಹನದಲ್ಲಿ ಬರುತ್ತಿದ್ದಾರೆ.’ ಎಂದು ಗ್ರಾಮೀಣ ಭಾಗದ ಹಿರಿಯರೊಬ್ಬರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಹಳ್ಳಿಗಳಲ್ಲಿ ಸವಾಲು: ಗ್ರಾಮೀಣ ಭಾಗದಲ್ಲಿ ಈಗ ವೃದ್ಧರ ಸಂಖ್ಯೆ ಹೆಚ್ಚಿದೆ. ವಾಹನ ಸಂಪರ್ಕವಿಲ್ಲ. ರಸ್ತೆ, ಫೋನ್ ನೆಟ್​ವರ್ಕ್ ಸಹ ಸರಿಯಾಗಿ ಸಿಗದ ಹಲವು ಹಳ್ಳಿಗಳಿವೆ. ಅಂಥ ಊರುಗಳ ಜನರಲ್ಲಿ ಈಗ ಆತಂಕ ಮನೆ ಮಾಡಿದೆ. ಕರೊನಾ ಹಬ್ಬಿ ಬಿಟ್ಟರೆ ಅದರ ನಿಯಂತ್ರಣ ಸವಾಲಾಗಿದೆ. ಮನೆಯ ಮಗನನ್ನು ಮನೆಗೆ ಬರಬೇಡ ಎಂದು ತಡೆಯಲಾರದೆ ಹಳ್ಳಿ ಜನ ಪರಿತಪಿಸುವಂತಾಗಿದೆ.

ಹೊರಗಿನವರಿಗೆ ಪ್ರವೇಶವಿಲ್ಲ: ಅಂಕೋಲಾ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಹೊರ ಊರಿನ ಜನರು ಬರುವುದನ್ನು ನಿರ್ಬಂಧಿಸಲಾಗಿದೆ. ಗೋಕರ್ಣಕ್ಕೆ ಮಾದನಗೇರಿ, ಸಗಡಗೇರಿ, ಅಗ್ರಗೋಣ ಮಾರ್ಗವನ್ನು ಸ್ಥಳೀಯರು ತಡೆದಿದ್ದಾರೆ. ವಿದೇಶಿಯರು ಮತ್ತು ಪ್ರವಾಸಿಗರು ಈ ಮಾರ್ಗದಲ್ಲಿ ಸಂಚರಿಸುವುದರಿಂದ ಅಗ್ರಗೋಣ ಗ್ರಾಪಂ ಸದಸ್ಯ ಗಣಪತಿ ಗೌಡ ಹಾಗೂ ಇತರರು ರಸ್ತೆಯನ್ನು ಬಂದ್ ಮಾಡಿದ್ದಾರೆ. ತಾಲೂಕಿನ ಶಿರೂರು ಗ್ರಾಮಕ್ಕೆ ತೆರಳುವ ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡಿರುವ ರಸ್ತೆಗೆ ಅಡ್ಡಲಾಗಿ ಕಲ್ಲು ಹಾಗೂ ಮುಳ್ಳನ್ನು ಹಾಕಿ ಬಂದ್ ಮಾಡಿ ಅಪರಿಚಿತ ವಾಹನಗಳ ಸಂಚಾರ ತಡೆಯಲಾಗಿದೆ.

ಸಗಡಗೇರಿ ಗ್ರಾಪಂ ವ್ಯಾಪ್ತಿಯಲ್ಲಿ ಹೊರ ಊರಿನ ಕಾರ್ವಿುಕರಿದ್ದು, ಸ್ಥಳೀಯರು ಆತಂಕಪಡುತ್ತಿದ್ದಾರೆ.ಇನ್ನು ಪ್ರವಾಸಿಗರು ಈ ಮಾರ್ಗದಲ್ಲಿ ತೆರಳುತ್ತಿದ್ದಾರೆ. ಗ್ರಾಮಕ್ಕೆ ಕರೊನಾ ಹಬ್ಬಿಸುವ ಆತಂಕವಿರುವುದರಿಂದ ಹೊರಗಿನವರನ್ನು ತಡೆಯಲಾಗುತ್ತಿದೆ. | ದೇವರಾಯ ನಾಯಕ ಜಿಲ್ಲಾ ಗ್ರಾಮೀಣ ಯುವ ಹೋರಾಟಗಾರ ಸಮಿತಿ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net