ಹಳ್ಳಕ್ಕೆ ಕಾರು ಮಗುಚಿ ಒಬ್ಬ ಸಾವು

01 HANUR 3
Published on

ಹನೂರು: ತಾಲೂಕಿನ ಕೋಣನಕೆರೆ-ತಾಳುಬೆಟ್ಟ ಮಾರ್ಗದ ಮೂಕಳ್ಳಿ ಮಾರಮ್ಮನ ದೇಗುಲದ ಬಳಿ ಶನಿವಾರ ಚಾಲಕ ನಿಯಂತ್ರಣ ತಪ್ಪಿದ ಪರಿಣಾಮ ಕಾರೊಂದು ಹಳ್ಳಕ್ಕೆ ಮಗುಚಿ ಬಿದ್ದು ಒಬ್ಬ ಮೃತಪಟ್ಟರೆ, ಮೂವರು ಗಾಯಗೊಂಡಿದ್ದಾರೆ.

ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಹುಲಿಯೂರು ದುರ್ಗ ಗ್ರಾಮದ ಸಂದೀಪ (30) ಮೃತ. ಈತನ ಸ್ನೇಹಿತರಾದ ವೆಂಕಟೇಶ್, ಮಧು ಹಾಗೂ ಉಮೇಶ್ ಗಾಯಗೊಂಡವರು.

ಈ ನಾಲ್ವರು ಬೆಳಗಿನ ಜಾವ 1.30ರಲ್ಲಿ ಮಲೆಮಹದೇಶ್ವರ ಬೆಟ್ಟದಲ್ಲಿ ಪೂಜೆ ಸಲ್ಲಿಸುವ ಸಲುವಾಗಿ ಕಾರಿನಲ್ಲಿ ತೆರಳುತ್ತಿದ್ದರು. ಆದರೆ ಮೂಕಳ್ಳಿ ಮಾರಮ್ಮನ ದೇಗುಲದ ಬಳಿ ಚಾಲಕ ನಿಯಂತ್ರಣ ತಪ್ಪಿದ ಕಾರಣ ಕಾರು ರಸ್ತೆ ಬದಿಯ ಹಳ್ಳಕ್ಕೆ ಮಗುಚಿ ಬಿದ್ದು ನಾಲ್ವರು ತೀವ್ರ ಗಾಯಗೊಂಡಿದ್ದಾರೆ.

ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲಿಸಿ ಗಾಯಾಳುವನ್ನು ಕೊಳ್ಳೇಗಾಲ ಸರ್ಕಾರಿ ಉಪ ವಿಭಾಗೀಯ ಆಸ್ಪತ್ರೆಗೆ ಕಳುಹಿಸಿಕೊಟ್ಟರು. ಆದರೆ ತೀವ್ರ ಗಾಯಗೊಂಡಿದ್ದ ಸಂದೀಪ್ ಮಾರ್ಗಮಧ್ಯೆಯೇ ಮೃತಪಟ್ಟಿದ್ದು, ಉಳಿದ ಮೂವರನ್ನು ಪ್ರಥಮ ಚಿಕಿತ್ಸೆ ಕೊಡಿಸಿ ಮೈಸೂರು ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ.

ಈ ಸಂಬಂಧ ಮೃತನ ಸಹೋದರ ಮಧುಸೂದನ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ರಾಮಾಪುರ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net