

ಪಾಂಡವಪುರ: ಸಾರ್ವಜನಿಕರು ಕುಡಿಯುವ ನೀರಿನ ಮಹತ್ವ ಅರಿತು ನೀರನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಆ ಮೂಲಕ ಮುಂದಿನ ಪೀಳಿಗೆಗೂ ಶುದ್ಧ ಕುಡಿಯುವ ನೀರು ಲಭ್ಯವಾಗುವಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹಳೇಬೀಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಧನಂಜಯ ಮನವಿ ಮಾಡಿದರು.
ಹಳೇಬೀಡು ಗ್ರಾಪಂ ಕಚೇರಿ ಆವರಣದಲ್ಲಿ ಹಳೇಬೀಡು ಮತ್ತು ನರಹಳ್ಳಿ ಗ್ರಾಮಗಳಿಗೆ 24/7 ನಿರಂತರ ಕುಡಿಯವ ನೀರು ಸರಬರಾಜು ಯೋಜನೆ ಉದ್ಘಾಟಿಸಿ ಅವರು ಮಾತನಾಡಿದರು. ಕೇಂದ್ರ ಸರ್ಕಾರ ಮಹತ್ವಕಾಂಕ್ಷೆ ಯೋಜನೆ ಜಲ ಜೀವನ್ ಮಿಷನ್ ಯೋಜನೆಯಡಿಯಲ್ಲಿ ಗ್ರಾಮದ ಪ್ರತಿ ಮನೆಗಳಿಗೂ ಶುದ್ಧ ಕುಡಿಯುವ ನೀರು ಒದಗಿಸಲಾಗುತ್ತಿದೆ. ಗ್ರಾಮಸ್ಥರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪಾಂಡವಪುರ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮಮತಾ ಮಾತನಾಡಿ, 24/7 ಕುಡಿಯುವ ನೀರು ಸರಬರಾಜು ಮಾಡುವುದರಿಂದ ನೀರಿನಿಂದ ಹರಡುವ ರೋಗಗಳು ಕಡಿಮೆಯಾಗುತ್ತವೆ. ಯಾವ ಸಮಯದಲ್ಲಾದರೂ ನೀರು ಪಡೆಯಬಹುದು. ಇದರಿಂದ ಸಮಯವಕಾಶ ವ್ಯರ್ಥವಾಗುವುದು ತಪ್ಪುತ್ತದೆ ಎಂದು ಹೇಳಿದರು.
ತಾಪಂ ಕಾರ್ಯನಿರ್ವಾಹಕ ಅಧಿಕಾರಿ ವೀಣಾ ಮಾತನಾಡಿ, ಜಲ ಜೀವನ ಮಿಷನ್ ಯೋಜನೆಯಡಿ ಹೊಸದಾಗಿ ಪೈಪ್‌ಲೈನ್ ಅಳವಡಿಸಲಾಗಿದ್ದು ಗ್ರಾಮದ ಎಲ್ಲ ಕುಟುಂಬಗಳಿಗೆ ಕಾರ್ಯಾತ್ಮಕ ನಲ್ಲಿ ಸಂಪರ್ಕ ಕಲ್ಪಿಸಲಾಗಿದೆ. ಸಾರ್ವಜನಿಕರು ನೀರನ್ನು ಅನ್ಯ ಉದ್ದೇಶಗಳಿಗೆ ಬಳಸದಂತೆ ಸಲಹೆ ನೀಡಿದರು.
ಪಿಡಿಒ ನಾಗರಾಜು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಮಂಡ್ಯ ಕಚೇರಿಯ ಲೋಹಿತ್, ರಶ್ಮಿ, ದೊಡ್ಡಮಾಯಿಗೌಡ, ದೀಪಾ, ಕಿರಿಯ ಇಂಜಿನಿಯರ್ ಪ್ರದೀಪ್, ಇಂಜಿನಿಯರ್ ಅಕ್ಷಯ್ ಇತರರು ಇದ್ದರು.