

ಗಂಡಸಿ: ಹೋಬಳಿಯ ನಾಗರಹಳ್ಳಿಕಟ್ಟಿ ಗ್ರಾಮದ ಆದಿಶಕ್ತಿ ಶ್ರೀಹಳೇಕೋಟೆ ಮಾರಮ್ಮ ದೇವಿ ನೂತನ ದೇವಾಲಯ ಉದ್ಘಾಟನೆ, ಶಿಖರ ಕಲಶ ಸ್ಥಾಪನಾ ಮಹೋತ್ಸವ ಎರಡು ದಿನಗಳು ಜರುಗಿತು.
ಗುರುವಾರ ಸಂಜೆ ನಾಗರಹಳ್ಳಿ ಗ್ರಾಮದ ಶ್ರೀ ಪ್ಲೇಗಿನಮ್ಮ, ಶ್ರೀ ಮಾರಮ್ಮ, ಮಂಜೇನಹಳ್ಳಿ ಶ್ರೀ ಚಾಮುಂಡೇಶ್ವರಿ ದೇವಿಯವರನ್ನು ಹೂವಿನಿಂದ ಅಲಂಕೃತಗೊಂಡ ರಥದ ಮೇಲೆ ಕೂರಿಸಿ ವೀರಗಾಸೆ, ಲಿಂಗದ ವೀರರ ಕುಣಿತ, ಸೋಮನ ಕುಣಿತ, ಕಾಳೆವಾದ್ಯ, ಕರಡೆ ವಾದ್ಯ, ಅರೆವಾದ್ಯ, ನಾದಸ್ವರಗಳೊಂದಿಗೆ ಮೆರವಣಿಗೆ ಮೂಲಕ ಶ್ರೀ ಹಳೆಕೋಟೆ ಮಾರಮ್ಮ ದೇವಿಯ ಮೂಲ ಸ್ಥಾನದ ಸನ್ನಿಧಿಗೆ ಕರೆತರಲಾಯಿತು. ರಾತ್ರಿ 9 ಗಂಟೆಗೆ ಮಂಡ್ಯದ ಮನೋಜ್ ಭಾರದ್ವಾಜ್, ನೆಲಮಂಗಲದ ಶ್ರೀ ಕವಿರಾಜ್ ಶರ್ಮಾ ಮತ್ತು ಪುರೋಹಿತರ ತಂಡದಿಂದ ಅಮ್ಮನವರಿಗೆ ಗಂಗಾ ಸ್ನಾನ, ಪಂಚ ಕಳಸ ಸ್ಥಾಪನೆ, ನವಗ್ರಹ ಶಾಂತಿ, ಮಹಾಗಣಪತಿ ಹೋಮ, ದುರ್ಗಿಹೋಮ, ಕಳಸ ಹೋಮ ನಡೆದವು.
ಶುಕ್ರವಾರ ಬೆಳಗ್ಗೆ 5.20 ರಿಂದ ದೇವಾಲಯಕ್ಕೆ ಕಳಸ ಏರಿಸುವುದು ನಂತರ ಜಾವಗಲ್ ಶಿಲ್ಪಿ ವಿಶ್ವನಾಥಾಚಾರ್ ಅವರಿಂದ ದೇವಿ ಅವರಿಗೆ ದೃಷ್ಟಿ ಪೂಜೆ, ಅಭಿಷೇಕ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಪೂರ್ಣಾಹುತಿ, ಮಧ್ಯಾಹ್ನ 12 ಗಂಟೆಗೆ ಪ್ಲೇಗಿನಮ್ಮ ದೇವಾಲಯದಿಂದ ಹಾಸನದ ಶ್ರೀ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಅವರನ್ನು ಮೆರವಣಿಗೆ ಮೂಲಕ ಹಳೇಕೋಟೆ ಮಾರಮ್ಮ ದೇವಿ ದೇವಾಲಯಕ್ಕೆ ಕರೆ ತರಲಾಯಿತು. ಮಹಾಮಂಗಳಾರತಿ ನಡೆಸಿ ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು. ಅನ್ನದಾಸೋಹ ಏರ್ಪಡಿಸಲಾಗಿತ್ತು.