ಕೊಳ್ಳೇಗಾಲ: ಹಳೇ ವೈಷಮ್ಯ ಹಿನ್ನೆಲೆಯಲ್ಲಿ ಬುಧವಾರ ನಗರಸಭೆಯ ನಾಮನಿರ್ದೇಶಿತ ಮಾಜಿ ಸದಸ್ಯ ಮತ್ತು ವ್ಯಕ್ತಿಯೊಬ್ಬನ ಮಧ್ಯೆ ಗಲಾಟೆ ನಡೆದಿದೆ.
ಕೊಳ್ಳೇಗಾಲ ಉಪ್ಪಾರ ಮೋಳೆ ಬಡಾವಣೆಯಲ್ಲಿ ನಗರಸಭೆ ನಾಮನಿರ್ದೇಶಿತ ಮಾಜಿ ಸದಸ್ಯ ನಟರಾಜು ಮತ್ತು ಕಲಾವಿದ ನಂಜುಂಡಸ್ವಾಮಿ (ಸ್ವಾಮಿ) ಪರಸ್ಪರ ಗಲಾಟೆ ಮಾಡಿಕೊಂಡಿದ್ದಾರೆ. ಸಣ್ಣ ಪುಟ್ಟ ಗಾಯಗಳಾಗಿದ್ದು, ಇಬ್ಬರೂ ಕೊಳ್ಳೇಗಾಲ ಸರ್ಕಾರಿ ಉಪ ವಿಭಾಗ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ನಾಮನಿರ್ದೇಶಿತ ಮಾಜಿ ಸದಸ್ಯ ನಟರಾಜು, ಹಳೇ ವೈಷ್ಯಮ ಹಿನ್ನೆಲೆಯಲ್ಲಿ ಸ್ವಾಮಿ ಎಂಬಾತ ನನ್ನ ಜತೆ ಗಲಾಟೆ ಮಾಡಿ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಿದರು. ಅಂತೆಯೇ, ನಂಜುಂಡಸ್ವಾಮಿ (ಸ್ವಾಮಿ) ಮಾತನಾಡಿ, ಬೇಕೆಂತಲೇ ನಟರಾಜು ನನ್ನ ಜತೆ ಗಲಾಟೆ ಮಾಡಿ ಹಲ್ಲೆ ಮಾಡಿದ್ದಾನೆ ಎಂದರು.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರ ಹೇಳಿಕೆಯನ್ನೂ ಕೊಳ್ಳೇಗಾಲ ಪಟ್ಟಣ ಪೊಲೀಸರು ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.