ಹಲವೆಡೆ ಮನೆಗಳ ಗೋಡೆ ಕುಸಿತ

26ark6
ಅರಕಲಗೂಡು ತಾಲೂಕಿನ ಯಲಗತವಳ್ಳಿ ಗ್ರಾಮದ ರಾಜೇಗೌಡ ಎಂಬುವರ ವಾಸದ ಮನೆ ಗೋಡೆ ಮಳೆಗೆ ಕುಸಿದಿದೆ.
Published on

ಅರಕಲಗೂಡು: ತಾಲೂಕಿನಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಹಲವೆಡೆ ವಾಸದ ಮನೆಗಳ ಗೋಡೆಗಳು ಕುಸಿದು ಬಿದ್ದು ನಿವಾಸಿಗಳು ಸಂಕಷ್ಟಕ್ಕೀಡಾಗಿದ್ದಾರೆ.

ದೊಡ್ಡಮಗ್ಗೆ ಹೋಬಳಿ ಯಲಗತವಳ್ಳಿ ಗ್ರಾಮದಲ್ಲಿ ಬುಧವಾರ ರಾಜೇಗೌಡ ಎಂಬುವರ ಮನೆಯ ಗೋಡೆ ಕುಸಿದಿದೆ. ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಗೆ ರಾಜೇಗೌಡ ಅವರ ಮನೆಯ ಗೋಡೆ ಶಿಥಿಲಗೊಂಡಿತ್ತು. ಇದೀಗ ಎಡೆಬಿಡದೆ ಸುರಿದಿದ್ದರಿಂದ ಮನೆಯ ಗೋಡೆ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ. ಕಣಿಯಾರು ಕೊಪ್ಪಲು ಗ್ರಾಮದ ನಿವಾಸಿ ಕೃಷ್ಣಗೌಡರ ಮನೆ ಗೋಡೆ ಕುಸಿದಿದೆ. ಮಲ್ಲೇಕೊಪ್ಪಲು ಗ್ರಾಮದ ಮಹದೇವಮ್ಮ ಎಂಬುವರ ಮನೆಗೆ ಹಾನಿ ಉಂಟಾಗಿದೆ. ಸ್ವಲ್ಪ ಪ್ರಮಾಣದಲ್ಲಿ ದಿನಸಿ ಪದಾರ್ಥಗಳಿಗೆ ಹಾನಿ ಉಂಟಾಗಿದೆ.

ಹೊನ್ನೇನಹಳ್ಳಿ, ರಾಗಿಮೂರು, ಹಂಪಾಪುರ, ಲಕ್ಕೂರು ಗ್ರಾಮದಲ್ಲಿ ತಲಾ ಒಂದು, ಕೇರಳಾಪುರ ಮತ್ತು ರುದ್ರಪಟ್ಟಣದಲ್ಲಿ ತಲಾ ಮೂರು, ಸೋಂಪುರ, ಕಾನನಕೊಪ್ಪಲು ಗ್ರಾಮದಲ್ಲಿ ತಲಾ ಎರಡು ಮನೆಗಳು ಮಳೆಯಿಂದ ಹಾನಿಗೀಡಾಗಿವೆ. ಮನೆಗಳ ಗೋಡೆ ಕುಸಿದು ಹಾನಿಗೀಡಾದ ಸ್ಥಳಕ್ಕೆ ಕಂದಾಯ ನಿರೀಕ್ಷಕರಾದ ಭಾಸ್ಕರ್, ರಾಘವೇಂದ್ರ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net