

ಬಾಗಲಕೋಟೆ: ಬೀಳಗಿ ಮತಕ್ಷೇತ್ರ ವ್ಯಾಪ್ತಿಯ ಬಾದಾಮಿ ತಾಲೂಕಿನ ಹಲಕುರ್ಕಿ ಗ್ರಾಮದ ಬಳಿ ಎರಡು ಸಾವಿರ ಎಕರೆ ಭೂಸ್ವಾಧೀನ ಮಾಡಿಕೊಳ್ಳಲಾಗುತ್ತಿದೆ. ವಿಮಾನ ನಿಲ್ದಾಣದ ಜೊತೆಗೆ ೧೫ ಸಾವಿರ ಕೋಟಿ ರೂ. ಮೌಲ್ಯದ ವಿವಿಧ ಉದ್ಯಮಗಳು ಸ್ಥಾಪನೆಯಾಗಲಿವೆ. ೨೦ ಸಾವಿರ ಜನರಿಗೆ ಉದ್ಯೋಗ ಸೃಷ್ಟಿಯಾಗಲಿವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಹೇಳಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು. ಟೆಕ್ಸಟೈಲ್ಸ, ಗ್ಲಾಸ್ ಫ್ಯಾಕ್ಟರಿ ಸೇರಿದಂತೆ ಬಾಗಲಕೋಟೆ ಜಿಲ್ಲೆಗೆ ಒಟ್ಟು ೬ ಕೈಗಾರಿಕೆಗಳು ಬರಲಿವೆ. ೨ ಸಾವಿರ ಎಕರೆ ಭೂಸ್ವಾದೀನ ಪೈಕಿ ೬೦೦ ಎಕರೆ ಸರ್ಕಾರಿ ಭೂಮಿ ಇದೆ. ಈಗಾಗಲೇ ೮೦೦ ಎಕರೆ ಜಮೀನು ಸ್ವಾಧೀನಕ್ಕೆ ರೈತರು ಒಪ್ಪಿಗೆ ಪತ್ರ ಕೊಟ್ಟಿದ್ದಾರೆ. ಭೂಮಿ ಕಳೆದು ಕೊಳ್ಳುವ ರೈತರು ಪರ್ಯಾಯ ಭೂಮಿ ಖರೀದಿಸಲು ವಿಶೇಷ ರಿಯಾಯಿತಿ ನೀಡಲಾಗುವುದು. ಉದ್ಯೋಗದಲ್ಲಿ ಮೀಸಲಾತಿ, ವಸತಿ ಬಡಾವಣೆ ನಿರ್ಮಿಸಿ ಕೊಡಲಾಗುವುದು. ವಿಮಾನ ನಿಲ್ದಾಣ ಸ್ಥಾಪನೆಯಿಂದ ಪ್ರವಾಸೋದ್ಯಮ ಅಭಿವೃದ್ಧಿ ಆಗಲಿದ್ದು, ಈಗಾಗಲೇ ಸರ್ವೆ ಕಾರ್ಯ ಆಗಿದೆ. ರೈತರು ಭೂಮಿ ನೀಡಿದಲ್ಲಿ ಉದ್ಯಮ ಸ್ಥಾಪನೆಗೆ ಚಾಲನೆ ನೀಡಲಾಗುವುದು. ೧೮ ತಿಂಗಳಲ್ಲಿ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.
ಬಂಡವಾಳ ಹೂಡಿಕೆದಾರರ ಸಮಾವೇಶದ ಮೂಲಕ ೯.೮೨೧ ಲಕ್ಷ ಕೋಟಿ ರೂ. ಕರ್ನಾಟಕದಲ್ಲಿ ಹೂಡಿಕೆ ಮಾಡಿಕೊಳ್ಳಲು ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಉಳಿದ ಭಾಗದಲ್ಲಿ ಬಂಡವಾಳ ಹೂಡಿಕೆ ಮಾಡಲು ಉದ್ಯಮಿಗಳಿಗೆ ಆಹ್ವಾನಿಸಲಾಗಿದೆ. ಅನೇಕ ಜನ ಸಿದ್ಧರಿದ್ದಾರೆ. ಉದ್ಯಮಗಳಿಗೆ ಸಕಲ ರೀತಿಯಿಂದ ಸೌಕರ್ಯ ಒದಗಿಸಲಾಗುವುದು. ಅಲ್ಲದೆ ಕೈಗಾರಿಕೆಗಾಗಿ ಭೂಮಿ ಕಳೆದುಕೊಳ್ಳುವವರಿಗೆ ಇಲಾಖೆಯಿಂದ ಅನೇಕ ಪ್ರಯೋಜನೆ, ಸಬ್ಸಿಡಿ ನೀಡಲಾಗುತ್ತಿದೆ. ಎಸ್ಸಿ,ಎಸ್ಸಿ, ಮಹಿಳಾ ಉದ್ಯಮಿಗಳಿಗೆ ಅವಕಾಶ ನೀಡಲಾಗುತ್ತಿದೆ ಎಂದು ಹೇಳಿದರು.
ಜಿ.ಪಂ ಮಾಜಿ ಅಧ್ಯಕ್ಷ ಹೂವಪ್ಪ ರಾಠೋಡ ಇದ್ದರು.