

ರಾಣೆಬೆನ್ನೂರ: ತಾಲೂಕಿನ ಹರನಗಿರಿ ಗ್ರಾಮದಲ್ಲಿ ಘನತ್ಯಾಜ್ಯ ಘಟಕ ನಿರ್ವಣದ ಸ್ಥಳಕ್ಕಾಗಿ ಗ್ರಾಮಸ್ಥರ ನಡುವೆ ಜಟಾಪಟಿ ಶುರುವಾಗಿದೆ. ಆದರೆ, ಅಚ್ಚರಿ ಎಂದರೆ ಕಾಮಗಾರಿ ಮಾಡುವ ಮುನ್ನವೇ ಗ್ರಾಪಂ ಪಿಡಿಒ ನರೇಗಾ ಕಾರ್ವಿುಕರ ಹೆಸರಿನಲ್ಲಿ ಸಂಪೂರ್ಣ ಹಣ ಡ್ರಾ ಮಾಡಿಕೊಂಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸೂಚನೆ ಮೇರೆಗೆ ಕಳೆದ ಜೂನ್ ತಿಂಗಳಲ್ಲಿ ಗ್ರಾಪಂ ವತಿಯಿಂದ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ 44,500 ರೂಪಾಯಿ ವೆಚ್ಚದಲ್ಲಿ ಗ್ರಾಮದಲ್ಲಿ ಘನತ್ಯಾಜ್ಯ ಘಟಕ ನಿರ್ವಣಕ್ಕೆ ಸ್ಥಳ ಗುರು ತಿಸಲಾಗಿತ್ತು. ಆದರೆ, ಗ್ರಾಪಂ ಗುರುತಿಸಿದ ಜಾಗದ ಅಕ್ಕಪಕ್ಕದ ಕೆಲವರು ‘ಘನತ್ಯಾಜ್ಯ ಘಟಕ ದಿಂದ ದುರ್ವಾಸನೆ ಬರುತ್ತದೆ. ಇಲ್ಲಿ ಮಾಡಬೇಡಿ’ ಎಂದು ತರಕಾರು ಅರ್ಜಿ ಸಲ್ಲಿಸಿದ್ದರು. ಇದರಿಂದಾಗಿ ಘಟಕ ನಿರ್ಮಾಣ ಕಾರ್ಯವನ್ನು ಕೈ ಬಿಡಲಾಗಿತ್ತು. ಆದರೆ, ಗ್ರಾಪಂ ಪಿಡಿಒ ಘನತ್ಯಾಜ್ಯ ಘಟಕ ಕಾಮಗಾರಿ ಮಾಡಲಾಗಿದೆ ಎಂದು ಹೇಳಿ, ಸರ್ಕಾರದಿಂದ ಬಂದ ಹಣವನ್ನು ಕಾರ್ವಿುಕರ ಖಾತೆಗೆ ವರ್ಗಾಯಿಸಿದ್ದಾರೆಂಬ ಆರೋಪ ಕೇಳಿ ಬಂದಿದೆ.
ಕೂಲಿ ಕಾರ್ವಿುಕರ ಖಾತೆಗೆ ಹಣ: ಗ್ರಾಮ ದಲ್ಲಿ ಘನತ್ಯಾಜ್ಯ ಘಟಕ ನಿರ್ವಿುಸದಿದ್ದರೂ 21 ಜನ ನರೇಗಾ ಕೂಲಿ ಕಾರ್ವಿುಕರ ಖಾತೆಗೆ ಹಣ ಜಮೆ ಮಾಡಲಾಗಿದೆ. 21 ಜನ ತಲಾ ಏಳು ದಿನ ಹಾಗೂ ಒಟ್ಟು 154 ಮಾನವ ದಿನಗೂಲಿ ಹೆಸರಲ್ಲಿ ಹಣ ವರ್ಗಾವಣೆ ಮಾಡಲಾಗಿದೆ. ಅಲ್ಲದೆ, ಕಾರ್ವಿುಕರ ಖಾತೆಗೆ ಜಮಾ ಆಗಿರುವ ಹಣವನ್ನು ವಾಪಸ್ ವಸೂಲಿ ಮಾಡಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ.
ನರೇಗಾದಡಿ ಯಾವುದೇ ಕಾಮಗಾರಿ ಮಾಡಿದರೂ ಅದರ ಹಣ ಡ್ರಾ ಮಾಡಿಕೊಳ್ಳಬೇಕಾದರೆ ಜಿಪಿಎಸ್ ಮಾಡಬೇಕು. ಕೂಲಿ ಕಾರ್ವಿುಕರಿಂದ ಎನ್ಎಂಆರ್ಗೆ ಸಹಿ ಮಾಡಿಸಿಕೊಳ್ಳಬೇಕು. ಕಾಮಗಾರಿಯ ಅಂದಾಜು ವೆಚ್ಚವನ್ನು ಸಿದ್ಧಪಡಿಸಿಕೊಳ್ಳಬೇಕು. ಇಷ್ಟೆಲ್ಲ ದಾಖಲಾತಿ ಮಾಡಿದಾಗ ಮಾತ್ರ ನರೇಗಾ ಹಣ ಕೂಲಿ ಕಾರ್ವಿುಕರ ಖಾತೆಗೆ ಜಮಾ ಆಗಲಿದೆ.
ಆದರೆ, ಹರನಗಿರಿ ಗ್ರಾಪಂನಲ್ಲಿ ಘನತ್ಯಾಜ್ಯ ಘಟಕ ನಿರ್ವಿುಸದೇ ಸರ್ಕಾರದಿಂದ ಹಣ ಡ್ರಾ ಮಾಡಿಕೊಂಡಿರುವುದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಈ ಕುರಿತು ಗ್ರಾಪಂ ಪಿಡಿಒ ರಂಗಪ್ಪ ಕೊರಕಲಿ ಅವರನ್ನು ವಿಚಾರಿಸಿದಾಗ, ‘ಜಾಗದ ಸಮಸ್ಯೆ ಬಗೆಹರಿದಿದೆ. ಈಗ ಕಾಮಗಾರಿ ಮಾಡುತ್ತೇವೆ’ ಎಂದು ಸಮಜಾಯಿಷಿ ನೀಡಿದ್ದಾರೆ. ಆದರೆ, ಹಣ ಡ್ರಾ ಮಾಡಿಕೊಂಡ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿದರು.
ನರೇಗಾದಡಿ ಕಾಮಗಾರಿ ಮಾಡದೆ ಹಣ ಡ್ರಾ ಮಾಡಿಕೊಳ್ಳಬಹುದು ಎಂಬುದನ್ನು ಹರನಗಿರಿ ಗ್ರಾಪಂನವರು ಸಾಬೀತು ಮಾಡಿ ತೋರಿಸಿದ್ದಾರೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕೂಡಲೆ ಸೂಕ್ತ ಕ್ರಮ ಕೈಗೊಂಡು ಘನತ್ಯಾಜ್ಯ ಘಟಕದ ಹಣ ಡ್ರಾ ಮಾಡಿಕೊಂಡ ಬಗ್ಗೆ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು.| ಹೆಸರು ಹೇಳಲಿಚ್ಛಿಸದ ಹರನಗಿರಿ ಗ್ರಾಮಸ್ಥ
ಹರನಗಿರಿ ಗ್ರಾಪಂ ಪಿಡಿಒ ಘನತ್ಯಾಜ್ಯ ಘಟಕ ನಿರ್ಮಾಣ ಕೆಲಸ ನಡೆದಿದೆ ಎಂದು ನಮ್ಮ ಬಳಿ ಹೇಳಿದ್ದಾರೆ. ಆದರೆ, ಕಾಮಗಾರಿ ಮಾಡದೆ ನರೇಗಾ ಹಣ ತೆಗೆದಿರುವುದು ಅಪರಾಧ. ಈ ಬಗ್ಗೆ ಸ್ಥಳ ಪರಿಶೀಲನೆ ನಡೆಸುತ್ತೇನೆ. ಕಾಮಗಾರಿ ಮಾಡದಿರುವುದು ಕಂಡು ಬಂದರೆ, ಕೂಡಲೆ ಪಿಡಿಒ ಮೇಲೆ ಕಾನೂನು ಕ್ರಮ ಜರುಗಿಸಲು ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗುವುದು.| ಟಿ.ಆರ್. ಮಲ್ಲಾಡದತಾಪಂ ಇಒ ರಾಣೆಬೆನ್ನೂರ