ಹಬ್ಬನಪಾಲ ಗ್ರಾಮಕ್ಕೆ ಪ್ರವೇಶ ನಿರ್ಬಂಧ

30 YLP 02
Published on

ಯಲ್ಲಾಪುರ: ಲಾಕ್​ಡೌನ್ ಆದೇಶವಿದ್ದರೂ ಕೆಲವರು ನಿಯಮ ಉಲ್ಲಂಘಿಸಿ ಹೊರಗಡೆ ಓಡಾಡುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತೆ ಕ್ರಮವಾಗಿ ತಾಲೂಕಿನ ಆನಗೋಡ ಗ್ರಾ.ಪಂ. ವ್ಯಾಪ್ತಿಯ ಹಬ್ಬನಪಾಲ ಗ್ರಾಮಸ್ಥರು ಗ್ರಾಮಕ್ಕೆ ಪ್ರವೇಶವನ್ನು ನಿರ್ಬಂಧಿಸಿದ್ದಾರೆ.

‘ಹಬ್ಬನಪಾಲ ಕ್ರಾಸ್ ಬಳಿ ರಸ್ತೆಯನ್ನು ಮುಚ್ಚಲಾಗಿದ್ದು, ಊರಿಗೆ ಪ್ರವೇಶ ನಿರ್ಬಂಧಿಸಿದೆ’ ಎಂಬ ಫಲಕ ಅಳವಡಿಸಲಾಗಿದೆ. ಗ್ರಾಮೀಣ ಭಾಗದ ಜನತೆ ಕರೊನಾ ಕುರಿತು ಜಾಗ್ರತರಾಗಿ ನಿಯಮ ಪಾಲಿಸುತ್ತಿದ್ದರೂ ಪಟ್ಟಣದಲ್ಲಿ ಮಾತ್ರ ಜನತೆ ಅಷ್ಟಾಗಿ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಸೋಮವಾರ ಅನಗತ್ಯವಾಗಿ ಹೊರಬಂದವರನ್ನು ಪೊಲೀಸರು ತಡೆದು, ವಾಹನಗಳ ದಾಖಲೆಗಳನ್ನು ಪರಿಶೀಲಿಸಿ, ಸರಿಯಿಲ್ಲದ ವಾಹನಗಳ ಸವಾರರಿಗೆ ದಂಡ ವಿಧಿಸಿದರು.

ಗ್ರಾಮೀಣ ಭಾಗದಲ್ಲಿ ಸಮಸ್ಯೆ: ಪಟ್ಟಣದಲ್ಲಿ ವಾರ್ಡ್​ವಾರು ದಿನಸಿ, ತರಕಾರಿ ಇತರ ಅಗತ್ಯ ವಸ್ತುಗಳ ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ. ಅದು ಬಹುತೇಕ ಸಮರ್ಪಕವಾಗಿ ನಡೆಯುತ್ತಿದೆ. ಆದರೆ, ಹಳ್ಳಿಗರಿಗೆ ಮಾತ್ರ ಅಗತ್ಯ ವಸ್ತುಗಳಿಗಾಗಿ ಪರದಾಟ ತಪ್ಪಿಲ್ಲ. ಗ್ರಾಪಂಗಳ ನೇತೃತ್ವದಲ್ಲಿ ಆಯಾ ಗ್ರಾಮದಲ್ಲೇ ಅಗತ್ಯ ವಸ್ತುಗಳು ಲಭ್ಯವಾಗುವಂತೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದು, ಅದು ಕೆಲವೇ ಗ್ರಾಮೀಣ ಭಾಗಗಳಲ್ಲಿ ಮಾತ್ರ ನಡೆಯುತ್ತಿದೆ. ಉಳಿದಂತೆ ಜನತೆ ಅಗತ್ಯ ವಸ್ತುಗಳೂ ದೊರೆಯದೇ, ಅದನ್ನು ತರಲೆಂದು ಪಟ್ಟಣಕ್ಕೂ ಬರಲಾಗದೇ ಪರದಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net