

ಬೆಳಗಾವಿ: ಭಾರತ ಸಂಸ್ಕೃತಿ, ಆಚಾರ ವಿಚಾರಗಳ ಬೀಡು. ಇಲ್ಲಿ ಬಡವನಾಗಲಿ, ಶ್ರೀಮಂತನಾಗಲಿ ಎಲ್ಲರೂ ಭಕ್ತಿ ಪರಂಪರೆ ಹೊಂದಿದ್ದಾರೆ ಎಂದು ವಿಧಾನ ಪರಿಷತ್‌ನ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಹೇಳಿದರು.
ಶಿವಬಸವ ನಗರದ ಕಾರಂಜಿಮಠದಲ್ಲಿ ನಡೆದ 289ನೆಯ ಮಾಸಿಕ ಶಿವಾನುಭವಗೋಷ್ಠಿ ಹಾಗೂ ಪ್ರಥಮ ಶ್ರಾವಣ ವಿಶೇಷ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶತಶತಮಾನಗಳ ಪರಕೀಯರ ಆಳ್ವಿಕೆ ನಂತರವೂ ಇಲ್ಲಿ ಮೂಲ ಸಂಸ್ಕೃತಿ ಹಾಗೆ ಉಳಿದಿದೆ. ಇದಕ್ಕೆ ಮೂಲ ಕಾರಣ ಇಲ್ಲಿನ ವಿಶಿಷ್ಟ ಹಬ್ಬಗಳು. ಈ ಹಬ್ಬಗಳು ಪರಸ್ಪರರಲ್ಲಿ ಭಾವೈಕ್ಯ ಬೆಳೆಸುವ ಕೊಂಡಿಯಾಗಿವೆ ಎಂದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕ ಹಾಗೂ ದೇವಾಲಯಗಳ ಸಂವರ್ಧನಾ ಸಮಿತಿಯ ರಾಜ್ಯ ಸಂಯೋಜಕ ಮನೋಹರ ಮಠದ ಮಾತನಾಡಿ, ಭಾರತವು ತನ್ನ ಶ್ರೀಮಂತ ಸಂಸ್ಕೃತಿ ಮತ್ತು ವೈವಿಧ್ಯಮಯ ಹಬ್ಬಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿನ ಹಬ್ಬಗಳು ಕೇವಲ ಆಚರಣೆಗಳಲ್ಲ, ಬದಲಿಗೆ ಇವು ಸಮಾಜದ ಏಕತೆ, ಸಹೋದರತ್ವ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯ ಪ್ರತೀಕವಾಗಿವೆ ಎಂದು ಹೇಳಿದರು.
ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ ಮಾತನಾಡಿ, ಭಾರತೀಯ ಹಬ್ಬಗಳು ಧಾರ್ಮಿಕ ನಂಬಿಕೆ ಮತ್ತು ಆಚರಣೆಗಳ ಮೇಲೆ ಅವಲಂಬಿತವಾಗಿವೆ. ಇವು ಭಗವಂತನ ಆರಾಧನೆ ಮತ್ತು ಆಧ್ಯಾತ್ಮಿಕ ಉನ್ನತಿಗೆ ಅವಕಾಶ ನೀಡುತ್ತವೆ ಎಂದರು. ಉಪನ್ಯಾಸಕ ಏ.ಕೆ. ಪಾಟೀಲ, ವಕೀಲ ವಿ.ಕೆ. ಪಾಟೀಲ ಇತರರಿದ್ದರು.