

ಹನೂರು: ಪಟ್ಟಣ ಸೇರಿದಂತೆ ತಾಲೂಕಿನ ಸುತ್ತಮುತ್ತಲ ಗ್ರಾಮಗಳಲ್ಲಿ ಬುಧವಾರ ಕ್ರೈಸ್ತರು ಕ್ರಿಸ್‌ಮಸ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ಹಬ್ಬದ ಅಂಗವಾಗಿ ಪಟ್ಟಣದ ಕ್ರಿಸ್ತರಾಜ ಶಿಕ್ಷಣ ಸಂಸ್ಥೆಯ ಆವರಣದಲ್ಲಿರುವ ವೇಳಾಂಗಣಿ ಆರೋಗ್ಯ ಮಾತೆ ದೇಗುಲದಲ್ಲಿ ಧರ್ಮಗುರು ರೋಷನ್ ಅವರ ನೇತೃತ್ವದಲ್ಲಿ ಬಲಿಪೂಜೆ, ಕೀರ್ತನೆಗಳು ಹಾಗೂ ಪ್ರಾರ್ಥನೆಗಳು ಜರುಗುವುದರ ಮೂಲಕ ಕ್ರಿಸ್ತನಿಗೆ ನಮನ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಕ್ರಿಸ್‌ಮಸ್ ಹಬ್ಬದ ಶುಭ ಸಂದೇಶ ನೀಡಿದರು. ಯೇಸುವಿನ ಸಂದೇಶಗಳ ಬಗ್ಗೆ ಬೋಧನೆ ನೀಡಲಾಯಿತು. ಪೂಜೆ ಹಾಗೂ ಕೀರ್ತನೆಗಳು ಮುಗಿದ ಬಳಿಕ ಸಿಹಿ ವಿತರಿಸಲಾಯಿತು. ಪಟ್ಟಣ ಸೇರಿದಂತೆ ತಾಲೂಕಿನ ಆಯಾ ಗ್ರಾಮದ ಚರ್ಚ್‌ಗಳಲ್ಲಿ ಕ್ರೈಸ್ತರು ಯೇಸುಕ್ರಿಸ್ತನಿಗೆ ಪ್ರಾರ್ಥನೆ ಸಲ್ಲಿಸಿದರು.
ಯೇಸುಕ್ರಿಸ್ತರು ದನದ ಕೊಟ್ಟಿಗೆಯಲ್ಲಿ ಜನಿಸಿದ ಹಿನ್ನೆಲೆಯಲ್ಲಿ ಪಟ್ಟಣದ ವೇಳಾಂಗಣಿ ಆರೋಗ್ಯ ಮಾತೆ ದೇಗುಲದ ಆವರಣ ಸೇರಿದಂತೆ ತಾಲೂಕು ವ್ಯಾಪ್ತಿಯ ಚರ್ಚ್ ಆವರಣದಲ್ಲಿ ಬಾಲಯೇಸು ಜನಿಸಿದ ಸನ್ನಿವೇಶದ ಚಿತ್ರಣವನ್ನೊಳಗೊಂಡ ಗೋದಲಿ ನಿರ್ಮಾಣ ಮಾಡಿ ಮಾದರಿಯನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಗೋದಲಿಯನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಚರ್ಚ್‌ಗಳು ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸಿದವು.
ಹನೂರು ಸೇರಿದಂತೆ ಮಾರ್ಟಳ್ಳಿ, ಹೂಗ್ಯಂ, ಸಂದನಪಾಳ್ಯ, ಸುಳ್ವಾಡಿ, ವಡ್ಡರದೊಡ್ಡಿ, ವಡಕೆಹಳ್ಳ, ಕಾಮಗೆರೆ, ತೊಮಿಯಾರ್‌ಪಾಳ್ಯ, ಅಣಗಳ್ಳಿದೊಡ್ಡಿ, ಕೌದಳ್ಳಿ, ಪಿ.ಜಿ.ಪಾಳ್ಯ ಹಾಗೂ ಕ್ಷೇತ್ರ ವ್ಯಾಪ್ತಿಯ ಇನ್ನಿತರ ಗ್ರಾಮಗಳಲ್ಲಿ ಕ್ರೈಸ್ತರು ಆಯಾ ಗ್ರಾಮದ ಚರ್ಚ್‌ನ ಧರ್ಮಗುರುಗಳ (ಫಾದರ್) ಸಮ್ಮುಖದಲ್ಲಿ ಪೂಜೆ ಸಲ್ಲಿಸಿದರು. ಮನೆಗಳನ್ನು ಕ್ರಿಸ್‌ಮಸ್ ಟ್ರೀ, ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.