ಹನಗೋಡು ಅಣೆಕಟ್ಟೆ ಭರ್ತಿ

IMG-20250527-WA0190(2)
Published on

ಹನಗೋಡು: ನಾಗರಹೊಳೆ ಉದ್ಯಾನ ವ್ಯಾಪ್ತಿಯಲ್ಲಿ ಕೆಲ ದಿನಗಳಿಂದ ಸತತವಾಗಿ ಮಳೆಯಾಗುತ್ತಿರುವುದರಿಂದ ಲಕ್ಷ್ಮಣತೀರ್ಥ ನದಿಯ ಹನಗೋಡು ಅಣೆಕಟ್ಟೆ ಭರ್ತಿಯಾಗಿದೆ. ಅಣೆಕಟ್ಟೆಯಿಂದ ನೀರು ಹರಿಯುವ ದೃಶ್ಯ ಮನಮೋಹಕವಾಗಿದೆ.

ಈ ಬಾರಿ ಬೇಸಿಗೆಯಲ್ಲಿ ಲಕ್ಷ್ಮಣತೀರ್ಥ ನದಿ ನೀರಿನ ಹರಿವು ಸ್ಥಗಿತವಾಗಿತ್ತು. ಏಪ್ರಿಲ್‌ನಲ್ಲಿ ಮಳೆಯೇ ಬೀಳಲಿಲ್ಲ. ಇದರಿಂದ ಬೇಸಿಗೆ ಬೆಳೆಗೆ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿತ್ತು.

ಮೇ ತಿಂಗಳಲ್ಲಿ ಕೊಡಗು ಹಾಗೂ ನಾಗರಹೊಳೆ ಉದ್ಯಾನದಲ್ಲಿ ಸುರಿದ ಸತತ ಮಳೆಯಿಂದಾಗಿ ಒಂದು ವಾರದಿಂದಲೂ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ. ಮೂರು ದಿನಗಳ ಹಿಂದಷ್ಟೇ ಹನಗೋಡು ಅಣೆಕಟ್ಟೆ ಮೇಲೆ ಮೂರೂವರೆ ಸಾವಿರ ಕ್ಯೂಸೆಕ್ (ಎರಡೂವರೆ ಅಡಿ) ನೀರು ಹರಿಯುತ್ತಿದ್ದು, ನದಿಯಲ್ಲಿ ಹನಗೋಡಿನಿಂದ ಹುಣಸೂರಿನವರೆಗೆ ನೀರು ತಲುಪಿದೆ. ಹನಗೋಡು ಅಣೆಕಟ್ಟೆಯಿಂದ ತಾಲೂಕಿನ 40 ಕೆರೆಗಳಿಗೆ ನೀರು ತುಂಬಿಸಲಾಗುವುದಲ್ಲದೆ, 30 ಸಾವಿರ ಎಕರೆಗೂ ಹೆಚ್ಚು ಪ್ರದೇಶಕ್ಕೆ ನೀರು ಲಭ್ಯವಾಗಲಿದೆ. ನೀರಾವರಿ ಸಲಹಾ ಸಮಿತಿ ಸಭೆ ಹಾಗೂ ಇಲಾಖೆ ಹಿರಿಯ ಅಧಿಕಾರಿಗಳ ಆದೇಶ ಬಂದ ನಂತರ ಕಾಲುವೆಗೆ ನೀರು ಹರಿಸಿ ಕೆರೆ-ಕಟ್ಟೆಗಳನ್ನು ತುಂಬಿಸಲಾಗುವುದು ಎಂದು ಹನಗೋಡು ಹಾರಂಗಿ ಕಚೇರಿಯ ಜೆಇ ವಿಜೇಂದ್ರ ತಿಳಿಸಿದ್ದಾರೆ.

ಬೆಳೆ ಹಾನಿ: ಹನಗೋಡು ಅಣೆಕಟ್ಟೆಯ ಹಿನ್ನೀರಿನಿಂದಾಗಿ ಹಿಂಡಗುಡ್ಲು ಗ್ರಾಮದ ಸೀತಾರಾಮಯ್ಯ, ನಾಗೇಶ್, ಮಂಜುನಾಥ್, ಶಿವೇಗೌಡ, ಪುಟ್ಟೇಗೌಡ, ಮರಿಗೌಡ, ಮಾದೇಗೌಡ, ಮಾವಳ್ಳಿಗೌಡ, ಭೈರೇಗೌಡ ಎಂಬುವರಿಗೆ ಸೇರಿದ ತಂಬಾಕು, ಮುಸುಕಿನ ಜೋಳ, ಶುಂಠಿ ಬೆಳೆ ಮುಳುಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net