ಹದಿನೈದಕ್ಕೂ ಹೆಚ್ಚು ಗ್ರಾಮಗಳ ರಸ್ತೆ ಬಂದ್

26HLY-1
Published on

ಹಳಿಯಾಳ: ತಾಲೂಕಿನ ಹದಿನೈದಕ್ಕೂ ಹೆಚ್ಚು ಗ್ರಾಮಗಳಲ್ಲಿ ಮಾರ್ಗಗಳನ್ನು ಮುಚ್ಚಿ ದಿಗ್ಬಂಧನ ಹಾಕಿದ್ದಾರೆ.

ತೆಗ್ನಳ್ಳಿ, ಕೆಸರೊಳ್ಳಿ, ಖಾಮದೊಳ್ಳಿ, ಅಲ್ಲೋಳ್ಳಿ, ಕೆರವಾಡ, ಯಡೋಗಾ, ಬಿಕೆ ಹಳ್ಳಿ, ತತ್ವಣಗಿ, ಮಂಗಳವಾಡ, ಹವಗಿ, ಸಾತ್ನಳ್ಳಿ ಮೊದಲಾದ ಗ್ರಾಮಗಳ ಅಗಸಿ ಬಾಗಿಲುಗಳನ್ನು ಮುಚ್ಚಲಾಗಿದೆ. ಗ್ರಾಮಕ್ಕೆ ಹೊರಗಿನವರು ಬರದಂತೆ, ಗ್ರಾಮಸ್ಥರು ಪರವಾಣಿಗೆ ಪಡೆದೆ ಹೊರಗೆ ಹೋಗಿ ಬರುವ ಹಾಗೇ ಕಟ್ಟಪ್ಪಣೆ ಮಾಡಲಾಗಿದೆ.

ಯಡೋಗಾ ಗ್ರಾಮಕ್ಕೆ ಮಹಾರಾಷ್ಟ್ರದಿಂದ ಆಗಮಿಸಿದವರು ಗ್ರಾಮಸ್ಥರ ಆಕ್ಷೇಪಣೆಯಿಂದಾಗಿ ಮರುದಿನವೇ ಗ್ರಾಮ ಬಿಟ್ಟು ತೆರಳಿದ್ದಾರೆ. ಇನ್ನೂ ರಾಮಾಪುರ ಗ್ರಾಮದಲ್ಲಿನ ಮನೆಯೊಂದಕ್ಕೆ ಬಂದಿರುವ ಹೊರ ರಾಜ್ಯದ ನಿವಾಸಿಗೆ ಕೈಗೆ ಹಾಕಿರುವ ಮುದ್ರೆಯನ್ನು ನೋಡಿದ ಗ್ರಾಮಸ್ಥರು ರಾತೋರಾತ್ರಿ ಗ್ರಾಮ ತೊರೆಯುವಂತೆ ಪಟ್ಟು ಹಿಡಿದ ಘಟನೆ ಬುಧವಾರ ರಾತ್ರಿ ಸಂಭವಿಸಿದೆ. ಘಟನೆ ತಿಳಿದು ಗ್ರಾಮಕ್ಕೆ ಧಾವಿಸಿದ ಪೊಲೀಸ್ ಸಭೆ ನಡೆಸಿ ವಾತಾವರಣ ತಿಳಿಗೊಳಿಸಿದ್ದಾರೆ.

ಪೊಲೀಸ್ ಲಾಠಿ ಏಟು: ಲಾಕ್ ಡೌನ್ ಘೊಷಣೆಯಾಗಿದ್ದರೂ ಪಟ್ಟಣದೆಲ್ಲೆಡೆ ಬೈಕ್ ಮೂಲಕ ಅನಗತ್ಯವಾಗಿ ಸುತ್ತಾಡುವರಿಗೆ ಪೊಲೀಸ್ ಲಾಠಿ ಏಟಿನ ರುಚಿ ಉಣಿಸಿದರು. ಪೊಲೀಸ್ ಲಾಠಿ ಚಾರ್ಜ್ ಮಾಡುತ್ತಿರುವು ದನ್ನು ಆಕ್ಷೇಪಿಸಿ ಪಟ್ಟಣವಾಸಿಗಳು ಹಾಗೂ ಹಲವು ಸಂಘಟನೆಗಳು ಶಾಸಕ ಆರ್.ವಿ. ದೇಶಪಾಂಡೆ ಅವರಿಗೆ ಪೋನ್ ಕರೆ ಮಾಡಿ ದೂರನ್ನು ನೀಡಿದ್ದಾರೆ.

ನೋಡಲ್ ಅಧಿಕಾರಿಗಳು: ವಿದೇಶದಿಂದ ಹಾಗೂ ಹೊರ ರಾಜ್ಯದಿಂದ ಬಂದವ ರನ್ನು ಗುರುತಿಸಿ ವೈದ್ಯಕೀಯ ಪರಿಶೀಲನೆ ಮಾಡಲಾಗುತ್ತಿದೆ. ಈ ಕಾರ್ಯದ ನಿರ್ವಹಣೆಗಾಗಿ ಹಳಿಯಾಳ ಹೋಬಳಿ- ಹೆಸ್ಕಾಂ ಎಇಇ ರವೀಂದ್ರ ಮೆಟಗುಡ್(9480881753), ಸಾಂಬ್ರಾಣಿ ಹೋಬಳಿ- ಜಿಪಂ ಎಇಇ ಎ.ಸಿ.ಹಳೇಮನಿ, (9448267826), ಮುರ್ಕವಾಡ -ಬಿಇಒ ಸಮೀರ ಮುಲ್ಲಾ (8277437484) ಅವರನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net