ಹತ್ತಿ ಬಿಡಿಸಲು ಬರುತ್ತಿಲ್ಲ ಕೂಲಿ ಕಾರ್ವಿುಕರು!

12-RNR-01
Published on

ರಾಣೆಬೆನ್ನೂರ: ಕರೊನಾ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಕೃಷಿ ಕಾರ್ವಿುಕರು ಕೆಲಸಕ್ಕೆ ಬರುವುದನ್ನೇ ನಿಲ್ಲಿಸಿದ್ದಾರೆ. ಹೀಗಾಗಿ ಅರಳಿ ನಿಂತಿರುವ ಹತ್ತಿ ಬಿಡಿಸುವ ಕಾರ್ಯಕ್ಕೆ ಹಿನ್ನಡೆಯಾಗಿದ್ದು, ರೈತರು ಚಿಂತಿತರಾಗಿದ್ದಾರೆ.

ತಾಲೂಕಿನ ಕಳೆದ ಮುಂಗಾರಿನಲ್ಲಿ 12 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬೆಳೆಯಲಾಗಿತ್ತು. ಆಗಸ್ಟ್, ಅಕ್ಟೋಬರ್​ನಲ್ಲಿ ಅತಿವೃಷ್ಟಿಯಿದಾಗಿ ಸಂಪೂರ್ಣ ಬೆಳೆ ಹಾಳಾಗಿ ಹೋಗಿತ್ತು. ರೈತರು ಹಿಂಗಾರು ಮಳೆ ಅವಲಂಬಿಸಿ ಮತ್ತೆ 8 ಸಾವಿರಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬೆಳೆದಿದ್ದಾರೆ. ಸ್ಥಳೀಯ ಎಪಿಎಂಸಿಯಲ್ಲಿ ಹತ್ತಿ ಖರೀದಿಗೆ ಚಾಲನೆ ನೀಡಲಾಗಿದೆ. ಆದರೆ, ಗಿಡದಲ್ಲಿ ಅರಳಿ ನಿಂತ ಹತ್ತಿ ಬಿಡಿಸಿ, ಮಾರುಕಟ್ಟೆಗೆ ಸಾಗಿಸಲು ಪರದಾಡುವಂತಾಗಿದೆ.

ಮಳೆ ಉತ್ತಮವಾಗಿದ್ದರಿಂದ ಹತ್ತಿ ಬೆಳೆ ಉತ್ತಮವಾಗಿಯೇ ಬಂದಿದೆ. ಇದೀಗ ಹತ್ತಿ ಸಂಪೂರ್ಣ ಅರಳಿಕೊಂಡಿದ್ದು, ಬಿಡಿಸಲು ಬಂದಿದೆ. ಕೆಲ ರೈತರು ಈಗಾಗಲೇ ಒಂದು ಬೀಡ ಹತ್ತಿಯನ್ನು ಬಿಡಿಸಿ ಮಾರುಕಟ್ಟೆಗೆ ಸಾಗಿಸಿದ್ದಾರೆ. ಅವರು 2ನೇ ಬೀಡ ಬಿಡಿಸುವ ಯೋಚನೆಯಲ್ಲಿದ್ದರು. ಇನ್ನೂ ತಡವಾಗಿ ಬಿತ್ತನೆ ಮಾಡಿದ ರೈತರು ಒಂದನೇ ಬೀಡ ಬಿಡಿಸಿಲ್ಲ. ಇನ್ನೇನು ಹತ್ತಿ ಬಿಡಿಸಿ ಮಾರುಕಟ್ಟೆಗೆ ಕಳುಹಿಸಬೇಕು ಎನ್ನುವಷ್ಟರಲ್ಲಿಯೇ ಕರೊನಾ ಭೀತಿಯಿಂದ ಲಾಕ್​ಡೌನ್ ಘೊಷಿಸಲಾಯಿತು. ಮನೆಯಿಂದ ಯಾರೂ ಹೊರಬರಬಾರದು ಎಂಬ ಕಟ್ಟುನಿಟ್ಟಿನ ಕ್ರಮದಿಂದಾಗಿ ಹತ್ತಿ ಬಿಡಿಸುವ ಕೆಲಸಕ್ಕೆ ಬರಲು ಕೂಲಿ ಕಾರ್ವಿುಕರು ಹಿಂದೇಟು ಹಾಕುತ್ತಿದ್ದಾರೆ.

ಮಳೆ ನೋಡಿದರೆ ಎರಡ್ಮೂರು ದಿನಕ್ಕೊಮ್ಮೆ ಸುರಿಯುತ್ತಿದೆ. ಹತ್ತಿ ಸಂಪೂರ್ಣ ಅರಳಿ ನಿಂತಿದೆ. ಮಳೆ ಹೆಚ್ಚಿನ ಪ್ರಮಾಣದಲ್ಲಿ ಬಂದರೆ, ಹತ್ತಿ ಬೆಳೆ ನಾಶವಾಗಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಲಿದೆ.

ಎಪಿಎಂಸಿಯಲ್ಲಿ ಆವಕ ಇಳಿಕೆ

ಲಾಕ್​ಡೌನ್ ಹಿನ್ನೆಲೆಯಲ್ಲಿ ಕಳೆದ 16 ದಿನಗಳಿಂದ ಬಂದ್ ಮಾಡಲಾಗಿದ್ದ ಇಲ್ಲಿಯ ಎಪಿಎಂಸಿ ಮಾರುಕಟ್ಟೆಯನ್ನು ಪುನಃ ಆರಂಭಿಸಲಾಗಿದೆ. ಆದರೆ, ಹತ್ತಿ ಬಿಡಿಸಲು ಕಾರ್ವಿುಕರು ಸಿಗದ ಕಾರಣ ರೈತರಿಂದ ಎಪಿಎಂಸಿಗೆ ಹತ್ತಿ ಆವಕ ಆಗುತ್ತಿಲ್ಲ. ಈ ಹಿಂದೆ ಇಲ್ಲಿಯ ಎಪಿಎಂಸಿಗೆ ದಿನವೊಂದಕ್ಕೆ 4ರಿಂದ 5 ಸಾವಿರದವರೆಗೆ ಹತ್ತಿ ಅಂಡಿಗೆಗಳು ಆವಕವಾಗುತ್ತಿದ್ದವು. ಆದರೀಗ 800 ರಿಂದ 950 ಹತ್ತಿ ಅಂಡಿಗೆ ಮಾತ್ರ ಆವಕವಾಗುತ್ತಿವೆ.

ನಿರಂತರ ಸಂಕಷ್ಟ ತಂದಿದ್ದ ರೈತನ ಬಿಳಿ ಬಂಗಾರ...!

ಹತ್ತಿ ರೈತನ ಪಾಲಿಗೆ ಬಿಳಿ ಬಂಗಾರವೇ ಸರಿ. ಆದರೆ, ತಾಲೂಕಿನ ರೈತರ ಪಾಲಿಗೆ ಮಾತ್ರ ಹತ್ತಿ ಈಗ ಬಿಳಿ ಬಂಗಾರವಾಗಿ ಉಳಿದಿಲ್ಲ. 2018ರಲ್ಲಿ ತಾಲೂಕಿನಲ್ಲಿ 25 ಸಾವಿರ ಹೆಕ್ಟೇರ್​ಗೂ ಅಧಿಕ ಪ್ರದೇಶದಲ್ಲಿ ಹತ್ತಿ ಬೆಳೆಯಲಾಗಿತ್ತು. ಆ ವರ್ಷ ಮಳೆ ಸರಿಯಾಗಿ ಬಾರದೇ ಹಾಗೂ ಕೆಂಪುಕಾಯಿ ಕೊರಕ ರೋಗಕ್ಕೆ ತುತ್ತಾಗಿ ಬೆಳೆ ಕೈಕೊಟ್ಟು ರೈತ ಕಣ್ಣೀರು ಹಾಕಿದ್ದರು. ಇದರಿಂದಾಗಿ 2019ರ ಮುಂಗಾರಿನಲ್ಲಿ ಅರ್ಧದಷ್ಟು ರೈತರು ಹತ್ತಿ ಬೆಳೆ ಕೈಬಿಟ್ಟಿದ್ದರು. ಕೇವಲ 12 ಹೆಕ್ಟೇರ್​ನಷ್ಟು ಪ್ರದೇಶದಲ್ಲಿ ರೈತರು ಹತ್ತಿ ಬೆಳೆದಿದ್ದರು. ಅದು ಕೂಡ ಅತಿವೃಷ್ಟಿಯಿಂದ ಬೆಳೆ ಹಾಳಾಗಿತ್ತು. ನಂತರವೂ ರೈತರು ಹಿಂಗಾರಿನಲ್ಲಿ ಹತ್ತಿ ಬೆಳೆದಿದ್ದರು. ಆದರೆ, ಈ ಬಾರಿ ಬೆಳೆ ಬಂದ ಸಂದರ್ಭದಲ್ಲಿಯೇ ಕರೊನಾ ಕರಿನೆರಳು ಬಿದ್ದಿದೆ. ಹೀಗಾಗಿ ರೈತರು ಕೃಷಿ ಕಾರ್ವಿುಕರು ಸಿಗದೇ ಈಗಲೂ ಹತ್ತಿ ಮಾರಾಟ ಮಾಡಲು ಪರದಾಡುವಂತಾಗಿದೆ.

ಕೂಲಿಗಾರರನ್ನು ಕರೆಯಲು ಹೋದರೆ ಕರೊನಾ ಹೆಸರು ಹೇಳಿ ಯಾರೊಬ್ಬರು ಬರುತ್ತಿಲ್ಲ. ಹತ್ತಿ ನೋಡಿದರೆ ಅರಳಿ ನಿಂತಿದೆ. ಮೊನ್ನೆ ಮಳೆ ಬಂದಿದ್ದರಿಂದ ಹತ್ತಿ ಹಾಳಾಗುವ ಭೀತಿಯೂ ಎದುರಾಗಿದೆ. ಆದ್ದರಿಂದ ಕುಟುಂಬದವರೇ ಸೇರಿ ಸಾಧ್ಯವಾದಷ್ಟು ಹತ್ತಿ ಬಿಡಿಸಿ, ಮಾರಾಟ ಮಾಡಲು ಮುಂದಾಗಿದ್ದೇವೆ. ಎಪಿಎಂಸಿಯಲ್ಲೂ ಹೇಳಿಕೊಳ್ಳುವಷ್ಟು ಬೆಲೆ ಇಲ್ಲ. | ರಾಮಪ್ಪ ನಿಡಗುಂದಿ, ಹತ್ತಿ ಬೆಳೆಗಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net