

ಹುಣಸೂರು: ಪ್ರಸ್ತುತ ಸಾಲಿನ ತಂಬಾಕು ಹರಾಜು ವಹಿವಾಟು ಮಾ.16ಕ್ಕೆ ಅಂತ್ಯಗೊಂಡಿದ್ದು, ಈ ಬಾರಿ ಒಂದು ಕೆಜಿ ಹೊಗೆಸೊಪ್ಪಿಗೆ ದಾಖಲೆಯ ಬೆಲೆ 257.46 ರೂ.ಗಳನ್ನು ರೈತರು ಪಡೆದುಕೊಂಡಿದ್ದಾರೆ. ಇದು ಕಳೆದ ಒಂದು ದಶಕದ ದಾಖಲೆಯ ಬೆಲೆಯಾಗಿದ್ದು, ಭೀಕರ ಬರಗಾಲದ ಸಮಯದಲ್ಲಿ ತಂಬಾಕು ರೈತನನ್ನು ಕೈಹಿಡಿದಿದೆ.
2023-24ನೇ ಸಾಲಿನಲ್ಲಿ ರಾಜ್ಯದಲ್ಲಿ 100 ಮಿಲಿಯನ್ ಕೆಜಿ ಹೊಗೆಸೊಪ್ಪು ಉತ್ಪಾದಿಸುವ ಪ್ರಮಾಣ ನಿಗದಿಪಡಿಸಲಾಗಿತ್ತು. ಈ ಬಾರಿ ತೀವ್ರ ಬರಗಾಲದ ನಡುವೆಯೂ ರೈತರು ಉತ್ತಮವಾಗಿ ಬೆಳೆ ಬೆಳೆದಿದ್ದು, ಮಾರಾಟ ಆರಂಭವಾದ ಸೆ.29ರಿಂದ ಅಂತಿಮ ದಿನದವರೆಗೆ ಒಟ್ಟು 88.86 ಮಿಲಿಯನ್ ಕೆಜಿ ತಂಬಾಕು ಮಾರಾಟವಾಗಿದೆ. ಆರಂಭದ ದಿನ ಕೆಜಿ ಹೊಗೆಸೊಪ್ಪಿಗೆ 231ರೂ.ಗಳನ್ನು ನೀಡಲಾಗಿತ್ತು. ಈ ಬಾರಿ ಉತ್ತಮ ಬೆಲೆಯಾಗಿ ಕೆಜಿಗೆ ಗರಿಷ್ಠ 291 ರೂ.ಗಳನ್ನು ರೈತರು ಪಡೆದಿದ್ದಾರೆ.
ಸರಾಸರಿ ಬೆಲೆಯಲ್ಲಿ ಏರಿಕೆ
ಈ ಸಾಲಿನಲ್ಲಿ ಉತ್ತಮ ದರ್ಜೆಯ ತಂಬಾಕಿಗೆ ಕೆಜಿಗೆ ಸರಾಸರಿ 269.30 ಆಗಿದ್ದರೆ, ಮಧ್ಯಮ ದರ್ಜೆಯ ತಂಬಾಕಿಗೆ 259.20 ರೂ.ಗಳು ಹಾಗೂ ಕೆಳದರ್ಜೆಯ ತಂಬಾಕಿಗೆ 238.70 ರೂ.ಗಳು ಆಗಿದೆ. 2022-23ನೇ ಸಾಲಿಗೆ ಹೋಲಿಸಿದಲ್ಲಿ ಸರಾಸರಿ ಬೆಲೆಯಲ್ಲೂ ಏರಿಕೆ ಕಾಣಬಹುದಾಗಿದೆ. ಉತ್ತಮ ದರ್ಜೆ ತಂಬಾಕಿಗೆ ಕಳೆದ ಸಾಲಿಗಿಂತ 35.20 ರೂ.ಗಳು, ದ್ವಿತೀಯ ದರ್ಜೆ ತಂಬಾಕಿಗೆ 26.82 ರೂ.ಗಳು ಮತ್ತು ಕೆಳದರ್ಜೆಯ ತಂಬಾಕಿಗೆ 27.42 ರೂ.ಗಳು ಅಧಿಕವಾಗಿ ದೊರಕಿದೆ. ಈ ವರ್ಷದ ಸುಧಾರಿತ ಮಾರುಕಟ್ಟೆ ಪರಿಸ್ಥಿತಿಯಿಂದಾಗಿ ರೈತರಿಗೆ ಸರಾಸರಿ 29.46 ರೂ.ಗಳ ಏರಿಕೆಯ ಬೆಲೆ ದೊರಕಿದಂತಾಗಿದೆ ಎಂದು ತಂಬಾಕು ಮಂಡಳಿ ಪ್ರಾದೇಶಿಕ ವ್ಯವಸ್ಥಾಪಕ ಜಿ.ಬಿ..ಸುಬ್ಬರಾವ್ ತಿಳಿಸಿದ್ದಾರೆ.
10 ವರ್ಷಗಳಲ್ಲಿ ದಾಖಲೆಯ ಬೆಲೆ
ಕಳೆದ 10 ವರ್ಷಗಳಲ್ಲೇ ತಂಬಾಕಿಗೆ ಹರಾಜು ಮಾರುಕಟ್ಟೆಯಲ್ಲಿ ದಾಖಲೆಯ ಅತಿಹೆಚ್ಚು ಬೆಲೆ ದೊರಕಿದೆ. 2014-15ರಲ್ಲಿ ಸರಾಸರಿ ಬೆಲೆ ಕೆಜಿಗೆ 107.49 ರೂ.ಗಳಿತ್ತು. 2015-16ರಲ್ಲಿ 132.24 ರೂ.ಗಳು, 2016-17ರಲ್ಲಿ 134.58 ರೂ.ಗಳು, 2017-18ರಲ್ಲಿ 139.30 ರೂ.ಗಳು 2018-19ರಲ್ಲಿ 142.28 ರೂಗಳು, 2019-20ರಲ್ಲಿ 124.06 ರೂ.ಗಳು, 2020-21ರಲ್ಲಿ 119.87 ರೂ.ಗಳು, 2021-22ರಲ್ಲಿ 163.11 ರೂ.ಗಳು, 2022-23ರಲ್ಲಿ 228.01 ರೂ.ಗಳಿಗೆ ತಲುಪಿತ್ತು. 202-22ಕ್ಕೆ ಹೋಲಿಸಿದಲ್ಲಿ 2022-23ರಲ್ಲಿ ತಂಬಾಕಿನ ಬೆಲೆ ಶೇ.39.79ರಷ್ಟು ಹೆಚ್ಚಾಗಿತ್ತು. ಇದೀಗ ಪ್ರಸ್ತುತ ಸಾಲಿನ ಅಂತ್ಯಕ್ಕೆ ಮತ್ತೆ ಶೇ.12.92ರಷ್ಟು ಹೆಚ್ಚಿನ ದರವನ್ನು ನೀಡಲಾಗಿದೆ.
ಹುಡಿ ತಂಬಾಕಿನ ಗಮ್ಮತ್ತು
ಕಳೆದ 45 ವರ್ಷಗಳಿಂದ ಹುಡಿ ತಂಬಾಕನ್ನು ರೈತರು ತಮ್ಮ ಮನೆ ಬಾಗಿಲಿಗೆ ಬರುವ ಖಾಸಗಿ ಮಾರಾಟಗಾರರಿಗೆ ಕಡಿಮೆ ಬೆಲೆಗೆ ಮಾರಾಟ ಮಾಡಿ ಕೈತೊಳೆದುಕೊಳ್ಳುತ್ತಿದ್ದರು. ಆದರೆ 2022-23ನೇ ಸಾಲಿನಿಂದ ತಂಬಾಕು ಮಂಡಳಿಯೇ ಹುಡಿ ತಂಬಾಕನ್ನೂ ಕೂಡ ಖರೀದಿಸಲು ಮುಂದಾಯಿತು. ಪರಿಣಾಮ ರೈತರಿಗೆ ಇನ್ನಷ್ಟು ಅನುಕೂಲವಾಗಿ ಹುಡಿ ತಂಬಾಕಿಗೂ ಗೌರವಯುತ ಮತ್ತು ಲಾಭದಾಯಕ ಬೆಲೆ ದೊರಕುವಂತಾಯಿತು. ಕಳೆದ ಸಾಲಿನಲ್ಲಿ ಹುಡಿ ತಂಬಾಕಿಗೆ ಪ್ರತಿಕೆಜಿಗೆ ಸರಾಸರಿ 107.43ರೂ.ಗಳ ದಾಖಲೆಯ ಬೆಲೆ ಸಿಕ್ಕಿತ್ತು. ಪ್ರಸ್ತುತ ಸಾಲಿನಲ್ಲಿ ಹಿಂದಿನ ಸಾಲಿಗಿಂತ ಶೇ.31.75ರಷ್ಟು ಹೆಚ್ಚಳ ಕಂಡಿದೆ. ಈ ಸಾಲಿನಲ್ಲಿ 3.62 ಮಿಲಿಯನ್ ಕೆಜಿ ಹುಡಿ ತಂಬಾಕು ಮಾರಾಟವಾಗಿದ್ದು, ದಾಖಲೆಯ ಸರಾಸರಿ 141.54 ರೂ.ಗಳಿಗೆ ಮಾರಾಟವಾಗಿದೆ.
ಮುಂದಿನ ವರ್ಷಕ್ಕೆ 100ಮಿಲಿಯನ್ ಕೆಜಿ ನಿಗದಿ
2024-25ನೇ ಸಾಲಿಗಾಗಿ ತಂಬಾಕು ಮಂಡಳಿಯು ರಾಜ್ಯಕ್ಕೆ 100 ಮಿಲಿಯನ್ ಕೆಜಿ ತಂಬಾಕು ಬೆಳೆ ಪ್ರಮಾಣವನ್ನು ನಿಗದಿಪಡಿಸಿದೆ ಎಂದು ಮಂಡಳಿಯ ಅಧಿಕಾರಿಗಳು ತಿಳಿಸುತ್ತಾರೆ. ಪ್ರತಿ ಸಿಂಗಲ್ ಬ್ಯಾರನ್‌ಗೆ 1.70 ಹೆಕ್ಟೇರ್ ಮತ್ತು 1806 ಕೆಜಿ ತಂಬಾಕು ಎಂದು ಅಧಿಕೃತಗೊಳಿಸಲಾಗಿದೆ. ಮುಂದಿನ ಬೆಳೆ ಸಾಲಿನ ನೋಂದಣಿ ಪ್ರಕ್ರಿಯೆ ಮಾ.27ರಿಂದ ಆರಂಭವಾಗಲಿದೆ.
ಅಧಿಕೃತ ಪ್ರದೇಶದಲ್ಲಿ ಮಾತ್ರ ಬೆಳೆಯಿರಿ
ಎಫ್‌ಸಿವಿ ತಂಬಾಕು ಬೆಳೆಗಾರರು ಅಧಿಕೃತ ಪ್ರದೇಶಕ್ಕಿಂತ ಹೆಚ್ಚು ತಂಬಾಕು ಕೃಷಿ ಮಾಡಬಾರದು. ತಂಬಾಕು ಮಂಡಳಿಯ ನೋಂದಣಿ ಹೊಂದಿರದವರು ತಂಬಾಕು ಕೃಷಿ ಮಾಡಬಾರದು. ಬೆಳೆಗಾರರು ತಂಬಾಕಿನ ಜತೆ ಇತರೆ ಪರ್ಯಾಯ ಬೆಳೆಗಳನ್ನೂ ಬೆಳೆದಲ್ಲಿ ಯಾವುದೇ ಸಂಭವನೀಯ ಮಾರುಕಟ್ಟೆ ಏರಿಳಿತಗಳಿಂದ ರಕ್ಷಿಸಿಕೊಳ್ಳಲು ಸಾಧ್ಯವಿದೆ.
ಜಿ.ಬಿ.ಸುಬ್ಬರಾವ್,