

ಬಾಗಲಕೋಟೆ: ಗ್ರಾಪಂ ಮಾಜಿ ಅಧ್ಯಕ್ಷೆ. ಹಿರಿಯ ಜಾನಪದ ಕಲಾವಿಧೆಗೆ ಜಾನಪದ ಅಕ್ಯಾಡೆಮಿ ಪ್ರಶಸ್ತಿ ಒಲೆದು ಬಂದಿದ್ದು ಜಾನಪದ ಕಲಾಸಕ್ತರಲ್ಲಿ ಸಂತಸ ಮೂಡಿಸಿದೆ.
ಜಿಲ್ಲೆಯ ಜಮಖಂಡಿ ತಾಲೂಕಿನ ಸಿದ್ದಾಪೂರ ಗ್ರಾಮದ 75 ವರ್ಷ ವಯಸ್ಸಿನ ಶಿವನವ್ವ ಮಲ್ಲಪ್ಪ ಬಾವಿಕಟ್ಟಿ ಅವರಿಗೆ ಹಂತಿ ಪದ ವಿಭಾಗದಲ್ಲಿ ಜಾನಪದ ಅಕ್ಯಾಡೆಮಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
3ನೇ ತರಗತಿವರೆಗೆ ಮಾತ್ರ ಓದಿರುವ ಶಿವನವ್ವ ಅವರಿಗೆ ಓದು ಬರೆಯುವದಕ್ಕೆ ಬರುವದಿಲ್ಲ, ಆದರೂ ಸರಾಗವಾಗಿ ಜಾನಪದದಲ್ಲಿನ ಸಾವಿರಾರೂ ಹಾಡುಗಳನ್ನು ಹಾಡುತ್ತಾರೆ. ಜನರ ಬಾಯಿಯಿಂದ ಬಂದ ಹಾಡುಗಳನ್ನು ಕೇಳುತ್ತಾ ತಮ್ಮ 12ನೇ ವಯಸ್ಸಿನಿಂದ ಸೋಭಾನ ಪದ, ಒಳಕಲ್ಲು ಪೂಜೆ, ಸೀಮಂತ ಕಾರ್ಯದ ಹಾಡುಗಳು, ಬಿಸು ಕಲ್ಲಿನ ಪದ, ನಾಮಕರಣ ಹಾಡು, ಹಂತಿ ಪದ ಸೇರಿದಂತೆ ಗ್ರಾಮಿಣ ಸೊಗಡಿನ ಹಾಡುಗಳನ್ನು ಹಾಡುತ್ತಾರೆ. ತಾಲೂಕು ಸೇರಿದಂತೆ ಸುತ್ತಮುತ್ತಲಿನ ಗ್ರಾಮ, ಜಿಲ್ಲೆಗಳಿಗೆ ಹಾಡುವದಕ್ಕೆ ಶಿವನವ್ವ ಅವರನ್ನು ಆಹ್ವಾನಿಸುತ್ತಾರೆ.
ಇವರಿಗೆ ಸಂಘ ಸಂಸ್ಥೆಗಳು 8 ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ. ಸರ್ಕಾರದದಿಂದ ಇದೇ ಮೊದಲ ಭಾರಿಗೆ ಜಾನಪದ ಅಕ್ಯಾಡೆಮಿಯಿಂದ ವಾರ್ಷಿಕ ಪ್ರಶಸ್ತಿ ಬಂದಿದ್ದರಿಂದ ಸಂತೋಷ ವ್ಯಕ್ತ ಪಡಿಸಿದ್ದಾರೆ. ಜಾನಪದದಲ್ಲಿನ ಸಾವಿರಾರೂ ಹಾಡುಗಳನ್ನು ಮುಂದಿನ ಪಿಳಿಗೆಗೆ ಜಾನಪದ ಕಲೆಯನ್ನು ಜೀವಂತಿಕೆ ಉಳಿಸುವ ನಿಟ್ಟಿನಲ್ಲಿ ಹಾಡುಗಳನ್ನು ಬರೆಯಿಸಿ ಪುಸ್ತಕ ರಚಿಸುವ ಯೋಜನೆ ಹಾಕಿಕೊಂಡಿದ್ದಾರೆ.