ಹಂಗಾಮಿ ಕುಲಪತಿಯಾಗಿ ಡಾ. ನಾಮದೇವ ಅಧಿಕಾರ ಸ್ವೀಕಾರ

15HLY-1(A)
Published on

ಹಳಿಯಾಳ: ವಿಜಯಪುರ ಮಹಿಳಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ, ತಾಲೂಕಿನ ದುಸಗಿ ಗ್ರಾಮದ ಡಾ. ನಾಮದೇವ ಮಾರುತಿ ಗೌಡ ಅವರು ಹಂಗಾಮಿ ಕುಲಪತಿಯಾಗಿ ಸೋಮವಾರ ಅಧಿಕಾರ ಸ್ವೀಕರಿಸಿದರು. ಈ ಹಿನ್ನೆಲೆಯಲ್ಲಿ ನಾಮದೇವ ಅವರ ಮೂಲ ಗ್ರಾಮ ತಾಲೂಕಿನ ದುಸಗಿಯಲ್ಲಿ ಈಗ ಸಂಭ್ರಮ ಮನೆ ಮಾಡಿದೆ.

ತಂದೆ ಮಾರುತಿ, ತಾಯಿ ಶಾಂತಾ, ಪತ್ನಿ ಡಾ. ಶಕುಂತಲಾ ಅವರ ಬೆಂಬಲದೊಂದಿಗೆ ತಾವು ಉನ್ನತ ಮಟ್ಟ ತಲುಪಿಸಿರುವ ಸಂತಸವನ್ನು ಡಾ. ನಾಮದೇವ ಗೌಡ ಅವರು ‘ವಿಜಯವಾಣಿ’ ಜತೆ ಈ ಸಂದರ್ಭದಲ್ಲಿ ಹಂಚಿಕೊಂಡರು.

ಕಠಿಣ ಮಾರ್ಗ: ಡಾ. ನಾಮದೇವ ಅವರದು ಪರಿಶ್ರಮದ ಹಾದಿ. ಹೆಚ್ಚಿನ ಸೌಲಭ್ಯಗಳಿಲ್ಲದಿದ್ದರೂ ಶಿಕ್ಷಣ ಪಡೆದು, ಏನಾದರೂ ಸಾಧಿಸಬೇಕೆಂಬ ಛಲವೇ ಅವರನ್ನು ಉನ್ನತ ಸ್ಥಾನದತ್ತ ಕೊಂಡೊಯ್ದಿದೆ. ದುಸಗಿ ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ, ಅಳ್ನಾವರದಲ್ಲಿ ಪ್ರೌಢ ಶಿಕ್ಷಣ, ಧಾರವಾಡದ ವಿದ್ಯಾರಣ್ಯ ಕಾಲೇಜ್​ನಲ್ಲಿ ಪಿಯು ಶಿಕ್ಷಣ ಪಡೆದರು. ಕರ್ನಾಟಕ ಕಾಲೇಜ್​ನಲ್ಲಿ ಬಿ.ಎ. ಪದವಿಯಲ್ಲಿ ಪ್ರಥಮ ರ್ಯಾಂಕ್​ನೊಂದಿಗೆ ಚಿನ್ನದ ಪದಕ ಪಡೆದರು. ಕರ್ನಾಟಕ ವಿವಿಯಲ್ಲಿ ಹಿಂದಿ ಭಾಷೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಪ್ರಥಮ ರ್ಯಾಂಕ್ ಹಾಗೂ ಚಿನ್ನದ ಪದಕದೊಂದಿಗೆ ಗಳಿಸಿದರು. ಹಿಂದಿ ಭಾಷೆಯಲ್ಲಿ ಪಿಎಚ್​ಡಿ, ಕರ್ನಾಟಕ ವಿವಿಯಲ್ಲಿ ಗಾಂಧಿ ಅಧ್ಯಯನದಲ್ಲಿ ಡಿಪ್ಲೊಮಾ, ಹಿಂದಿ ಪ್ರಚಾರ ಸಭಾದಲ್ಲಿ ಬಿ. ಎಡ್ ಹಾಗೂ ಅನುವಾದದಲ್ಲೂ ಡಿಪ್ಲೊಮಾ ಪದವಿ ಪಡೆದಿದ್ದಾರೆ ನಾಮದೇವ.

20 ವರ್ಷಗಳ ಅನುಭವ: ಡಾ. ನಾಮದೇವ ಅವರಿಗೆ ಬೋಧನಾ ಕ್ಷೇತ್ರದಲ್ಲಿ 20 ವರ್ಷಗಳ ಅನುಭವವಿದೆ. 2000ರಲ್ಲಿ ಬೋಧನೆ ಆರಂಭಿಸಿದ ಅವರು ಜೆಎಸ್​ಎಸ್ ಕಾಲೇಜ್, ಕರ್ನಾಟಕ ಕಲಾ ಕಾಲೇಜ್, ಕರ್ನಾಟಕ ವಿವಿ, ಸ್ನಾತಕೋತ್ತರ ಪದವಿ ಸಂಶೋಧನ ಸಂಸ್ಥೆ, ಡಿಬಿಎಚ್​ಪಿ ಸಭಾ ಧಾರವಾಡ, ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಹಳಿಯಾಳ, ಮೈಸೂರಿನ ಮಹಾರಾಜ ಕಾಲೇಜ್ ಹಿಂದಿ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕ, ತಮಿಳುನಾಡು ತಿರುವರೂರು ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸಹ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ, ಸದ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿದ್ದರು.

ಸಾಹಿತ್ಯ ಸೇವೆ: ಈವರೆಗೆ ಡಾ. ನಾಮದೇವ ಅವರು 6 ಪುಸ್ತಕ, 25ಕ್ಕೂ ಹೆಚ್ಚು ಸಂಪಾದನ ಕೃತಿ ಹಾಗೂ 50ಕ್ಕೂ ಹೆಚ್ಚು ಸಂಶೋಧನಾ ಲೇಖನ ಬರೆದಿದ್ದಾರೆ. ಬೋಧನೆಯೊಂದಿಗೆ ಪಿಎಚ್​ಡಿ ಮತ್ತು ಎಂ.ಫಿಲ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ವಿದ್ಯಾಕ್ಷೇತ್ರದಲ್ಲಿನ ಇವರ ಅನುಭವ ಪರಿಗಣಿಸಿ ವಿಶ್ವವಿದ್ಯಾಲಯದ ಹಂಗಾಮಿ ಕುಲಪತಿಯ ಹುದ್ದೆ ಒಲಿದುಬಂದಿದೆ.

ನಾನು ಓದುವ ಸಮಯದಲ್ಲಿ ಇದ್ದತಂಹ ಕೊರತೆಗಳು ಈಗಿನ ತಲೆಮಾರಿನವರಿಗೆ ಇಲ್ಲ. ಸಾಕಷ್ಟು ಅನುಕೂಲಗಳಿವೆ. ಆದರೂ ಗುರಿ ಇಲ್ಲವೆಂದರೆ ಯಾವುದನ್ನೂ ಸಾಧಿಸಲು ಸಾಧ್ಯವಿಲ್ಲ. ಯಾರು ತಂದೆ, ತಾಯಿ, ಗುರುಗಳನ್ನು ಪ್ರೀತಿಸುತ್ತಾರೋ, ಆರಾಧಿಸುತ್ತಾರೋ ಅವರು ಜೀವನದಲ್ಲಿ ಉನ್ನತ ಮಟ್ಟಕ್ಕೆ ಏರುತ್ತಾರೆ. ದುಶ್ಚಟಗಳಿಗೆ ಬಲಿಯಾಗದೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು.| ಡಾ. ನಾಮದೇವ ಮಾರುತಿ ಗೌಡನಾಮದೇವ ಗೌಡ ಅವರ ಸಾಧನೆ ದುಸಗಿ ಗ್ರಾಮಕ್ಕೆ ಅಷ್ಟೇ ಅಲ್ಲ, ಇಡಿ ತಾಲೂಕು ಹೆಮ್ಮೆ ಪಡುವಂತಿದೆ. ಇಂದಿನ ಯುವ ಪೀಳಿಗೆಗೆ ಅವರ ಸಾಧನೆ ಪ್ರೇರಣಾದಾಯಕವಾಗಿದೆ. ಗ್ರಾಮದ ಹೆಮ್ಮೆಯ ಪುತ್ರನಿಗೆ ಗೌರವಿಸಲು ನಾವು ಆತುರತೆಯಿಂದ ಕಾಯುತ್ತಿದ್ದೇವೆ.| ರಾಘವೇಂದ್ರ ಸಾಂಬ್ರೆಕರ ದುಸಗಿ ಗ್ರಾಮದ ಯುವ ಮುಖಂಡ

ಹಂಗಾಮಿ ಕುಲಪತಿಯಾಗಿ ಅಧಿಕಾರ, ಸ್ವೀಕರಿಸಿದ, ಡಾ. ನಾಮದೇವ, ಗೌಡ,

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net