

ಹಾವೇರಿ: ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸಾರಿಗೆ ಇಲಾಖೆಯ ಸಹಯೋಗದೊಂದಿಗೆ ರೂಪಿಸಲಾದ ಕೋವಿಡ್-19 ಮೊಬೈಲ್ ಸ್ವ್ಯಾಬ್ ಸಂಗ್ರಹ ವಾಹನಕ್ಕೆ ಸಾರಿಗೆ ಸಚಿವ ಲಕ್ಷ್ಮಣ ಸವದಿ, ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಶುಕ್ರವಾರ ಚಾಲನೆ ನೀಡಿದರು.
ಈ ಬಸ್ ಗ್ರಾಮಗಳಿಗೆ ತೆರಳಿ ಜ್ವರ, ಕೆಮ್ಮು, ನೆಗಡಿ, ಉಸಿರಾಟದ ತೊಂದರೆಗಳು ಕಂಡು ಬಂದ ವ್ಯಕ್ತಿಗಳ ಗಂಟಲ ದ್ರವದ ಮಾದರಿಗಳನ್ನು ಸ್ಥಳೀಯವಾಗಿ ಸಂಗ್ರಹಿಸಲಿದೆ. ಈ ಉದ್ದೇಶಕ್ಕಾಗಿ ಸಾರಿಗೆ ಸಂಸ್ಥೆಯ ಬಸ್ವೊಂದನ್ನು ಪ್ರಯೋಗಾಲಯವಾಗಿ ಬದಲಾಯಿಸಿ ಒಳಗೆ ಮಾದರಿ ಸಂಗ್ರಹದ ಉಪಕರಣಗಳನ್ನು ಅಳವಡಿಸಿ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದೆ. ಸಂಸದ ಶಿವಕುಮಾರ ಉದಾಸಿ, ಶಾಸಕರಾದ ನೆಹರು ಓಲೇಕಾರ, ವಿರುಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಪೂಜಾರ, ವಾಯವ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ವಿ.ಎಸ್. ಪಾಟೀಲ, ಜಿಲ್ಲಾಧಿಕಾರಿ ಕೃಷ್ಣ ಬಾಜಪೈ, ಎಸ್ಪಿ ಕೆ.ಜಿ. ದೇವರಾಜ್, ಜಿಪಂ ಸದಸ್ಯ ಸಿದ್ದರಾಜ ಕಲಕೋಟಿ ಇತರರಿದ್ದರು.
176 ಜನರ ಲ್ಯಾಬ್ ವರದಿ ನೆಗಟಿವ್
ಹಾವೇರಿ: ಜಿಲ್ಲೆಯಲ್ಲಿ ತೀವ್ರ ಉಸಿರಾಟದ ತೊಂದರೆ, ನೆಗಡಿ, ಕಫದಿಂದ ಬಳಲುತ್ತಿದ್ದ 176 ಜನರ ಲ್ಯಾಬ್ ವರದಿ ನೆಗಟಿವ್ ಬಂದಿದ್ದು, ಶುಕ್ರವಾರ ಮತ್ತೆ 207 ಜನರ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಡಿಎಚ್ಒ ಡಾ. ರಾಜೇಂದ್ರ ದೊಡ್ಡಮನಿ ತಿಳಿಸಿದ್ದಾರೆ. ಒಟ್ಟು 6,111 ಜನರ ರಕ್ತ, ಗಂಟಲ ದ್ರವದ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, 5,235 ವರದಿಗಳು ನೆಗೆಟಿವ್, 10 ಕರೊನಾ ಪಾಸಿಟಿವ್ ಬಂದಿದ್ದು, ಮೂವರು ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಉಳಿದ 831 ಮಾದರಿಗಳ ಪರೀಕ್ಷಾ ವರದಿ ಬರಬೇಕಿದೆ. ಕರೊನಾ ಲಕ್ಷಣಗಳ ಆಧಾರದ ಮೇಲೆ ಸರ್ಕಾರಿ ಕ್ವಾರಂಟೈನ್ನಲ್ಲಿ 5 ಜನರನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.