ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಬಾಲ ಕಾರ್ಮಿಕ ಪದ್ಧತಿ ಮಾರಕ

balakarmika virodhi dina
Published on

ಅರಸೀಕೆರೆ ಗ್ರಾಮಾಂತರ: ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಬಾಲ ಕಾರ್ಮಿಕ ಪದ್ಧತಿ ಮಾರಕವಾಗಿದೆ. ಈ ಅನಿಷ್ಟ ಪದ್ಧತಿ ವಿರುದ್ಧ ಸಮರೋಪಾದಿಯಲ್ಲಿ ಸಾಮೂಹಿಕ ಆಂದೋಲನ ನಡೆಸಿದಾಗ ಮಾತ್ರ ಬಲಿಷ್ಠ ಸಮಾಜದೊಂದಿಗೆ ದೇಶ ಕಟ್ಟಲು ಭದ್ರ ಬುನಾದಿಯಾಗುತ್ತದೆ ಎಂದು ತಾಲೂಕು ಕಾನೂನು ಸೇವಾ ಸಮಿತಿ ಕಾರ್ಯದರ್ಶಿ ಮತ್ತು ಪ್ರಧಾನ ಸಿವಿಲ್ ನ್ಯಾಯಾಧೀಶೆ ಪಿ. ಮಮತಾ ಹೇಳಿದರು.

ತಾಲೂಕಿನ ಕಸಬಾ ಹೋಬಳಿ ಕೆಲ್ಲಂಗೆರೆ ಗೇಟ್ ಸಮೀಪದ ಅರವಿಂದ್ ಗಾರ್ಮೆಂಟ್ಸ್‌ನಲ್ಲಿ ಶನಿವಾರ ಜಿಲ್ಲಾ ಮತ್ತು ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಕಾರ್ಮಿಕ ಇಲಾಖೆ ಸಹಯೋಗದಲ್ಲಿ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನದ ಅಂಗವಾಗಿ ಕಾರ್ಮಿಕರಿಗೆ ಆಯೋಜಿಸಿದ್ದ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

14 ವರ್ಷದೊಳಗಿನ ಮಕ್ಕಳ ಬಗ್ಗೆ ಪಾಲಕರು, ಸಮಾಜ ಹೆಚ್ಚು ಜಾಗೃತವಾಗಿರಬೇಕು. ಹದಿಹರೆಯದ ಮಕ್ಕಳನ್ನು ದುಡಿಮೆಗೆ ಕಳುಹಿಸಿದಲ್ಲಿ ಹಣದ ವ್ಯಾಮೋಹದಿಂದ ದುಶ್ಚಟಗಳಿಗೆ ಶರಣಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ. ಬಾಲ್ಯಾವಸ್ಥೆಯಲ್ಲಿ ಶಿಕ್ಷಣವೂ ಇಲ್ಲದೆ, ದುಡಿಮೆಯೂ ಇಲ್ಲದ ಮಕ್ಕಳು ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗಿಯಾಗಿ ಮಾದಕ ವಸ್ತುಗಳ ವ್ಯಸನಿಗಳಾಗುವುದರ ಮೂಲಕ ಸಮಾಜ, ದೇಶಕ್ಕೆ ಮಾರಕರಾಗುತ್ತಾರೆ. 2011ರ ಸರ್ವೇ ಪ್ರಕಾರ ಭಾರತದಲ್ಲಿ 10 ಕೋಟಿ ಬಾಲ ಕಾರ್ಮಿಕರು ಇದ್ದಾರೆ ಎಂಬ ಮಾಹಿತಿ ಬಹಿರಂಗಗೊಂಡಿದೆ. ಇಂತಹ ಆತಂಕಕಾರಿ ಬೆಳವಣಿಗೆ ದೇಶಕ್ಕೆ ಅರ್ಥಿಕ ನಷ್ಟದೊಂದಿಗೆ ಮಾರಕವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು.

ಮಾದಕ ವಸ್ತುಗಳಿಗೆ ಶರಣಾಗುವ ಮಕ್ಕಳನ್ನು ಮೊದಲಿನ ಜೀವನ ಶೈಲಿಗೆ ಕರೆ ತರುವುದು ಕಷ್ಟಸಾಧ್ಯ. ಅಪ್ರಾಪ್ತ ಮಕ್ಕಳನ್ನು ಶಿಕ್ಷಣದ ಕಡೆಗೆ ಹೆಚ್ಚು ಕೇಂದ್ರೀಕರಿಸಲು ಎಲ್ಲರೂ ಶ್ರಮಿಸಬೇಕಿದೆ. 15 ರಿಂದ 25 ವರ್ಷದವರೆಗಿನ ಯುವ ಜನತೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢರಾಗುವ ಮೂಲಕ ಪ್ರಬುದ್ಧರಾಗುತ್ತಾರೆ. ಅರ್ಥಿಕವಾಗಿ ಹಿಂದುಳಿದ ಕುಟುಂಬಗಳ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ಸರ್ಕಾರಗಳು ಅನೇಕ ಯೋಜನೆಗಳನ್ನು ಜಾರಿಗೆ ತಂದಿವೆ. ಸರ್ಕಾರವೇ ಪ್ರತಿಯೊಬ್ಬ ವಿದ್ಯಾರ್ಥಿಯ ಶಿಕ್ಷಣಕ್ಕೆ ಖರ್ಚು ವೆಚ್ಚಗಳನ್ನು ಮಾಡುತ್ತಿದೆ. ಇಂತಹ ಯೋಜನೆಗಳನ್ನು ಸದುಪಯೋಗ ಮಾಡಿಕೊಂಡು ಮಕ್ಕಳನ್ನು ಬಾಲಕಾರ್ಮಿಕರನ್ನಾಗಿ ಮಾಡದೆ ಸದೃಢ ದೇಶ ಕಟ್ಟಬೇಕಿದೆ ಎಂದು ಹೇಳಿದರು.

ವಕೀಲರ ಸಂಘದ ಅಧ್ಯಕ್ಷ ಕೆ.ಜಿ.ಸದಾನಂದ, ಹಿರಿಯ ವಕೀಲರಾದ ಆರ್.ವಿಜಯಕುಮಾರ್, ಆರ್.ಲೋಕೇಶ್, ಸಿದ್ದಮಲ್ಲಪ್ಪ ಉಪನ್ಯಾಸ ನೀಡಿದರು. ಕಾರ್ಮಿಕ ಇಲಾಖೆ ನಿರೀಕ್ಷಕರಾದ ವೈ.ಎಲ್. ಶಶಿಕಲಾ, ಅನಿಲ್, ಅರವಿಂದ್ ಗಾರ್ಮೆಂಟ್ಸ್ ಲಿ.ನ ಜನರಲ್ ಮ್ಯಾನೇಜರ್ ರಾಘವೇಂದ್ರ, ಮುಖ್ಯ ವ್ಯವಸ್ಥಾಪಕ ಬಾಲರಾಜ್, ಕಿರಣ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net