

ಬಾಗಲಕೋಟೆ : ಭಾರತ ದೇಶ ಸ್ವಾತಂತ್ರ್ಯಗೊಳ್ಳಲು ಸಾಕಷ್ಟು ವೀರಸೇನಾನಿಗಳ ತ್ಯಾಗ,ಬಲಿದಾನವಿದೆ. ಅಂತಹ ಸ್ವಾತಂತ್ರ್ಯ ದಿನಾಚರಣೆಗೆ ಅರ್ಥ ಬರಬೇಕಾದರೆ ಕೇವಲ ರಾಜಕೀಯವಲ್ಲ,ಯಾವಾಗ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕವಾಗಿ, ಆರ್ಥಿಕವಾಗಿ, ಸಾಂಸ್ಕೃತಿಕವಾಗಿ ಸಮಾನತೆ ಬರುತ್ತದೆ ಆಗ ಸ್ವಾತಂತ್ರ್ಯ ದಿನಾಚರಣೆಗೆ ಅರ್ಥ ಬರುತ್ತದೆ ಎಂದು ಬಾಗಲಕೋಟೆ-ಚಿತ್ರದುರ್ಗ ಭೋವಿಪೀಠದ ಜಗದ್ಗುರು ಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮಿಗಳು ಹೇಳಿದರು.
ಅವರು 77ನೇ ಸ್ವಾತಂತ್ರ‍್ಯ ದಿನಾಚರಣೆ ಅಂಗವಾಗಿ ನವನಗರದ ಸೆಕ್ಟರ್ ನಂ. ೩೪ರ ಜೀವೇಶ್ವರ ಗುಡಿ ಹತ್ತಿರ ವೈಷ್ಣೋದೇವಿ ಕ್ರಿಯೇಷನ್ ವತಿಯಿಂದ ಆ. ೧೪ ಬುಧವಾರರಂದು ಮಧ್ಯಾರಾತ್ರಿ ೧೨ ಗಂಟೆಗೆ ಏರ್ಪಡಿಸಿದ್ದ ಸ್ವಾತಂತ್ರ್ಯ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಮಾತನಾಡಿ, ಆದರೆ ಭಾರತ ಇನ್ನೂ ಬಡತನದಲ್ಲಿದೆ. ನಿರುದ್ಯೋಗ ಸಮಸ್ಯೆ ಎದುರಿಸುತ್ತಿದೆ. ಶ್ರೇಣಿಕೃತ ಸಮಾಜದ ವ್ಯವಸ್ಥೆಯನ್ನು ಅನುಭವಿಸುತ್ತಿದೆ.ಇವೆಲ್ಲವೂ ನಿರ್ನಾಮವಾಗಿ ಸರ್ವರಿಗೆ ಸಮಬಾಳು ಸರ್ವರಿಗೂ ಸಮಪಾಲು ಎಂಬ ಅರಿತು ಬದುಕನ್ನು ಪ್ರತಿಯೊಬ್ಬರು ಕಟ್ಟಿಕೊಂಡಾಗ ಸ್ವತಂತ್ರ್ಯ ದಿನಾಚರಣೆಗೆ ಮಹತ್ವ ಬರುತ್ತದೆ ಎಂದರು.
ಕಮತಗಿ-ಕೋಟೆಕಲ್ ಹೊಳೆಹುಚ್ಚೇಶ್ವರ ಸಂಸ್ಥಾನಮಠದ ಹುಚ್ಚೇಶ್ವರ ಮಹಾಸ್ವಾಮಿಗಳು ಮಾತನಾಡಿ,ದೇಶದಲ್ಲಿ ನಾವು ಸುಖ, ಶಾಂತಿ, ನೆಮ್ಮದಿಯಿಂದ ಬದುಕುತ್ತಿದ್ದೇವೆ ಎಂದರೆ ಅದಕ್ಕೆ ಕಾರಣ ತ್ಯಾಗ, ಬಲಿದಾನ ಮಾಡಿದ ಸ್ವತಂತ್ರ್ಯ ಹೋರಾಟಗಾರರು.ಅವರನ್ನು ಸ್ಮರಿಸುವ ಕಾರ್ಯ ಅನುದಿನವೂ ಆಗಬೇಕಿದೆ. ಭಾರತೀಯರು ಭಾವನಾತ್ಮಕ ಜೀವಿಗಳು. ರಕ್ತಸಂಬಂಧ ಒಂದು ಹಂತಕ್ಕೆ ನಿಲ್ಲುತ್ತದೆ. ಆದರೆ ಸ್ವಾತಂತ್ರ್ಯಕ್ಕಾಗಿ, ಧರ್ಮಕ್ಕಾಗಿ ಹೋರಾಡಿದಂತ ಮಹನೀಯರನ್ನು ಮರೆಯಲು ಸಾಧ್ಯವಿಲ್ಲ ಎಂದು ತಿಳಿಸಿದರು.
ರಾಜ್ಯಸಭಾ ಸದಸ್ಯ ನಾರಾಯಣಸಾ ಬಾಂಢಗೆ ಧ್ವಜಾರೋಹಣ ಮಾಡಿ ಮಾತನಾಡಿ,ಭಾರತ ದೇಶವು ವಿವಿಧ ಕ್ಷೇತ್ರದಲ್ಲಿ ಅಗಾಧವಾದ ಸಾಧನೆ ಮಾಡುತ್ತ ದಾಪುಗಾಲಿಡುತ್ತಿದೆ.ಅದಕ್ಕೆ ಸ್ವಾತಂತ್ರö್ಯ ಹೋರಾಟಗಾರರ ತ್ಯಾಗ, ಬಲಿದಾನ ಕಾರಣ. ವೀರ ಹೋರಾಟಗಾರರಾದ ಮಹಾತ್ಮ ಗಾಂಧಿ, ಸುಭಾಸಚಂದ್ರ ಬೋಸ್ , ಭಗತ್ ಸಿಂಗ್, ವೀರ ಸಾರ್ವಕರ್ ಸೇರಿದಂತೆ ಹಲವರನ್ನು ಸ್ಮರೀಸಬೇಕು. ದೇಶದ ಅಭಿವೃದ್ಧಿಗೆ ಪಕ್ಷ, ಭೇದವನ್ನು ಮರೆತು ಎಲ್ಲರೂ ಒಗ್ಗಟ್ಟಾಗಿ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಹಿರಿಯ ಚಿತ್ರನಟರಾದ ಎ.ರವಿಶಂಕರ್ ಅಶ್ವಥ ಮಾತನಾಡಿ, ಕೇವಲ ಸ್ವಾತಂತ್ರ್ಯ ದಿನಾಚರಣೆ ವೇಳೆ ಸ್ವಾತಂತ್ರ್ಯ ಹೋರಾಟಗಾರ ಸ್ಮರಿಸದೇ ಅನುಕರಣ ಮಾಡದೇ ಅವರ ತತ್ವಾದರ್ಶಗಳನ್ನು ಅನುಸರಣೆ ಮಾಡಬೇಕು. ಆಗ ಸ್ವಾತಂತ್ರ್ಯವನ್ನು ಪಡೆದಿದ್ದಕ್ಕೂ ಸಾರ್ಥಕವಾಗುತ್ತದೆಂದರು.
.
ಚಿತ್ರ ನಿರ್ಮಾಪಕ ಘನಶ್ಯಾಂ ಭಾಂಡಗೆ ಪ್ರಸ್ತಾವಿಕ ಮಾತನಾಡಿ, ಪ್ರತಿ ವರ್ಷ ಸ್ವಾತಂತ್ರ್ಯ ದಿನವನ್ನು ನಾಡಿಗಾಗಿ ತ್ಯಾಗ ಮಾಡಿರುವ ಯೋಧರನ್ನು ಸ್ಮರಿಸುವ ದಿನವನ್ನಾಗಿ ಆಚರಿಸುತ್ತಿದ್ದೇವೆ. ಕಳೆದ ೩೦ ವರ್ಷಗಳಿಂದ ಮಧ್ಯರಾತ್ರಿಯಲ್ಲಿ ಧ್ವಜಾರೋಹಣ ನೆರವೇರಿಸಲಾಗುತ್ತಿದೆ ಎಂದು ಹೇಳಿದರು.
ಹಿರಿಯ ನಟ ಜೆ.ಕೆ.ಶ್ರೀನಿವಾಸ್ ಮೂರ್ತಿ, ನಟ ಅನಿರುದ್ಧ ಜತಕರ ಮಾತನಾಡಿದರು. ಈ ಸಂದರ್ಭದಲ್ಲಿ ಶಿರೂರಿನ ಕನಕ ಬ್ರಹ್ಮ ವಿದ್ಯಾಶ್ರಮದ ಚಿನ್ಮಯಾನಂದ ಮಹಾಸ್ವಾಮಿಗಳು, ಸುರಗಿರಿಬೆಟ್ಟದ ಭುವನೇಶ್ವರಿ ದೇವಿಯ ಅರ್ಚಕರಾದ ಲಕ್ಷ್ಮಣ ಶರಣರು, ನಟರಾದ ಕಲ್ಲೇಶವರ್ಧನ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ, ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಟಿ.ಪಾಟೀಲ, ಚಿಕ್ಕ ಮಕ್ಕಳ ತಜ್ಞ ಡಾ.ದೇವರಾಜ ಪಾಟೀಲ, ಡಾ.ಎಂ.ಎಸ್.ಮದರಕರ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಬಳ್ಳಾರಿ, ವಿಶೇಷಚೇತನ ಅಂತಾರಾಷ್ಟ್ರೀಯ ಕ್ರಿಕೆಟರ್ ಶಿವಾನಂದ ಗುಂಜಾಳ ಸೇರಿದಂತೆ ವೈಷ್ಣೋದೇವಿ ಕ್ರಿಯೇಷನ್ ತಂಡದವರು ಇದ್ದರು.